ಮಳವಳ್ಳಿ: ಡಿಸೆಂಬರ್ 18ರಿಂದ ಒಂದು ವಾರ ಮಳವಳ್ಳಿಯಲ್ಲಿ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಭಕ್ತರ ಆಶಯದಂತೆ ನಡೆಯಲಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶಿವರಾತ್ರಿ ಶಿವಯೋಗಿಗಳ ಜಯಂತಿ ಮಹೋತ್ಸವದ ನಿಮಿತ್ತ ಸುತ್ತೂರು ಮಠದ ಆವರಣದಲ್ಲಿ ಈಚೆಗೆ ನಡೆದ ಮಳವಳ್ಳಿ ತಾಲ್ಲೂಕಿನ ಮುಖಂಡರ ಹಾಗೂ ಹರಗುರು ಚರಮೂರ್ತಿಗಳ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
‘ರಾಜ್ಯದ ಹಲವೆಡೆ ಸುತ್ತೂರು ಜಯಂತಿ ಆಚರಣೆಯು ಭಕ್ತರ ಆಶಯದಂತೆ ಯಶಸ್ವಿಯಾಗಿ ನಡೆದಿದೆ. ಅದರಂತೆ ಮಳವಳ್ಳಿ ತಾಲ್ಲೂಕಿನಲ್ಲೂ ಜಯಂತಿ ಆಚರಿಸಲು ಎಲ್ಲರೂ ಮುಂದಾಗಬೇಕು. ಮಹೋತ್ಸವದಲ್ಲಿ ಸರ್ವ ಸಮುದಾಯದ ಪಾತ್ರ ಅಪಾರವಾಗಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು’ ಎಂದು ಸಲಹೆ ನೀಡಿದರು.
ಎಲ್ಲರೂ ಸ್ವಯಂ ಪ್ರೇರಿತರಾಗಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕಿದೆ. ಇಲ್ಲಿಯವರೆಗೆ ಆಚರಿಸಿದ ಜಯಂತಿ ಮಹೋತ್ಸವಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದ ಅವರು ಜಯಂತಿ ಆಚರಣೆಯಲ್ಲಿ ಭಕ್ತರ ಪಾತ್ರದ ಬಗ್ಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚಿಸಿ ಪಟ್ಟಣದಲ್ಲಿ ಎಲ್ಲ ಸಮುದಾಯಗಳ ಮುಖಂಡರ ಪೂರ್ವಭಾವಿ ಸಭೆ ಆಯೋಜಿಸಿ ಎಲ್ಲರ ಆಶಯದಂತೆ ಜಯಂತಿ ಆಚರಣೆಗೆ ಮುಂದಾಗೋಣ ಎಂದು ಹೇಳಿದರು.
ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ ಸೇರಿದಂತೆ ಅನೇಕ ಸ್ವಾಮೀಜಿಗಳು ಹಾಗೂ ಮುಖಂಡರು ಮಾತನಾಡಿದರು.
ಮಳವಳ್ಳಿ ತಾಲ್ಲೂಕಿನ ಎಲ್ಲಾ ಸ್ವಾಮೀಜಿಗಳು ವಿವಿಧ ಮುಖಂಡರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.