ADVERTISEMENT

ಮಳೆ: ಜಿಲ್ಲೆಯಲ್ಲಿ 28 ಮನೆಗಳಿಗೆ ಹಾನಿ

ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಅನ್ಬುಕುಮಾರ್‌

​ಪ್ರಜಾವಾಣಿ ವಾರ್ತೆ
Published 30 ಮೇ 2025, 5:51 IST
Last Updated 30 ಮೇ 2025, 5:51 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು 
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು    

ಮಂಡ್ಯ: ‘ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಿದ್ದಲ್ಲಿ ಒಂದು ತಿಂಗಳ ಮುನ್ನವೇ ಬೇಡಿಕೆಯನ್ನು ವರದಿ ನೀಡುವುದು ಕಡ್ಡಾಯ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಯ ವಿವರವೂ ವಾಡಿಕೆಯ ಪ್ರಕಾರ ಒಟ್ಟು 150.2 ಮಿ.ಮೀ ಇದ್ದು, ಮಾರ್ಚ್ ತಿಂಗಳಿಂದ ಮೇ 28ರವರೆಗೆ ವಾಸ್ತವವಾಗಿ 260.1 ಮಿ.ಮೀ ಮಳೆಯಾಗಿರುತ್ತದೆ ಎಂದು ತಿಳಿಸಿದರು.

ಮನೆಹಾನಿಗೆ ಸಂಬಂಧಿಸಿದಂತೆ ಕಳೆದ 2 ದಿನಗಳಲ್ಲಿ ಮಳೆಯಿಂದಾಗಿ 28 ಮನೆಗಳು ಹಾನಿಯಾಗಿದ್ದು, ಪರಿಹಾರ ಪಾವತಿಸಲು ಪರಿಹಾರ ತಂತ್ರಾಶದ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಮುಂಗಾರು ಪೂರ್ವ ಸಿದ್ಧತಾ ಕ್ರಮವಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ ಎಂದರು.

ಇಲಾಖಾವಾರು ತಮ್ಮ ವ್ಯಾಪ್ತಿಗೆ ಒಳಪಡುವ ಚರಂಡಿ ಮತ್ತು ಕಾಲುವೆಗಳಲ್ಲಿನ ಹೂಳು ತೆಗೆಯಲು ಕ್ರಮವಹಿಸಲಾಗಿದೆ. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್ ಪರಿಶೀಲಿಸಲು ಮತ್ತು ಅಗತ್ಯವಿದ್ದಲ್ಲಿ ಕೂಡಲೆ ಸರಿಪಡಿಸಲು ಕ್ರಮವಹಿಸಲಾಗಿದೆ ಎಂದರು.

2019ರಿಂದ 2024ರವರೆಗೆ ಬೆಳೆ ವಿಮೆಗಾಗಿ ಒಟ್ಟು ಅರ್ಜಿಗಳು 3,33,988 ನೋಂದಣಿಯಾಗಿದ್ದು, ಒಟ್ಟು 1,93,780 ಫಲಾನುಭವಿಗಳು ಪರಿಹಾರ ಪಡೆದಿರುತ್ತಾರೆ ಎಂದರು.

‘ಮೀನು ಆರೋಗ್ಯಕರ ಆಹಾರವಾಗಿದ್ದು, ಜಿಲ್ಲೆಯಲ್ಲಿ ಮೀನುಗಾರಿಕೆ ಕಡಿಮೆಯಿದೆ. ಮೀನು ಮಾರಾಟ ಮಾಡುವವರಿಗಾಗಿ ಆಟೊಗಳ ವ್ಯವಸ್ಥೆ ಒದಗಿಸುವ ಯೋಜನೆ ರೂಪಿಸಿ ಹಾಗೂ ಮೀನು ಮಾರುಕಟ್ಟೆಯನ್ನು ವೃದ್ಧಿಸಿ’ ಎಂದು ಮೀನುಗಾರಿಗೆ ಇಲಾಖೆಗೆ ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ನಗರಾಭಿವೃದ್ಧಿ ಕೋಶಾಧಿಕಾರಿ ಮಾಯಣ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪ್ರವಾಹ: 112 ಗ್ರಾಮಗಳ ಗುರುತು

ಮಳೆ ಬರುವ ಸೂಚನೆಯಿದ್ದಾಗ ಉಕ್ಕಿ ಹರಿಯುವ ಸೇತುವೆಗಳು ನದಿಗಳು ತೊರೆಗಳ ಸ್ಥಳಗಳಲ್ಲಿ ಹಾಗೂ ಅಪಾಯ ಮುನ್ಸೂಚನೆಯ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಪೂರ್ವಭಾವಿಯಾಗಿ ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್‌ ತಿಳಿಸಿದರು.  ಹಿಂದಿನ ವರ್ಷಗಳ ವಿಪತ್ತಿನ ಆದಾರದ ಮೇಲೆ ಜಿಲ್ಲೆಯ 112 ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಲಾಗಿದ್ದು ರಕ್ಷಣಾ ಸಲಕರಣೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರವಾಹಕ್ಕೆ ಒಳಗಾಗುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.