ADVERTISEMENT

ಕರಗ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 2:11 IST
Last Updated 30 ಮಾರ್ಚ್ 2022, 2:11 IST
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಮುಂಜಾನೆ ಮುತ್ತುಲಕ್ಷ್ಮಿ ಮಾರಮ್ಮ ದೇವಿಯ ಕರಗ ಮಹೋತ್ಸವ ನಡೆಯಿತು
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಮುಂಜಾನೆ ಮುತ್ತುಲಕ್ಷ್ಮಿ ಮಾರಮ್ಮ ದೇವಿಯ ಕರಗ ಮಹೋತ್ಸವ ನಡೆಯಿತು   

ಶ್ರೀರಂಗಪಟ್ಟಣ: ಪಟ್ಟಣದ ಮುತ್ತುಲಕ್ಷ್ಮಿ ಮಾರಮ್ಮನ ದೇವಿಯ 50ನೇ ವರ್ಷದ ಕರಗ ಮಹೋತ್ಸವ ಹಾಗೂ ಮುನೇಶ್ವರ ಸ್ವಾಮಿಯ ಪೂಜಾ ಮಹೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

ಪಟ್ಟಣದ ಕಾವೇರಿ ನದಿ ಸೋಪಾನಕಟ್ಟೆಯಿಂದ ಸೋಮವಾರ ರಾತ್ರಿ ಮುತ್ತುಲಕ್ಷ್ಮಿ ಮಾರಮ್ಮನ ಕರಗ ಉತ್ಸವ ಆರಂಭವಾಯಿತು. ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡೀ ಉತ್ಸವ ನಡೆಯಿತು.

ಜಾನಪದ ಕಲಾ ತಂಡಗಳ ಸಹಿತ ನಡೆದ ಕರಗ ಉತ್ಸವಕ್ಕೆ ಪ್ರತಿ ಮನೆಯ ಮುಂದೆ ಭಕ್ತರು ಪೂಜೆ ಸಲ್ಲಿಸಿದರು. ಮಂಗಳವಾರ ಮುಂಜಾನೆ ವೇಳೆಗೆ ರೈಲು ನಿಲ್ದಾಣ ಬಳಿ ಇರುವ ದೇವಾಲಯಕ್ಕೆ ಉತ್ಸವ ಆಗಮಿಸಿತು.

ADVERTISEMENT

ಕೊಂಡೋತ್ಸವಕ್ಕಾಗಿ ದೇವಾಲ ಯದ ಮುಂದೆ ಬೆಂಕಿಯ ಕೊಂಡವನ್ನು ಸಿದ್ಧಪಡಿಸಲಾಗಿತ್ತು. ಕರಗವನ್ನು ಹೊತ್ತಿದ್ದ ಮುತ್ತುಲಕ್ಷ್ಮಿ ಮಾರಮ್ಮನ ಗುಡ್ಡಪ್ಪ ಬಿ. ಕುಮಾರ್‌ ಕೊಂಡವನ್ನು ಹಾಯ್ದರು. ಕೊಂಡ ಹಾಯುವ ವೇಳೆ ಮುತ್ತುಲಕ್ಷ್ಮಿ ಮಾರಮ್ಮ ದೇವಿಯ ಪರ ಘೋಷಣೆಗಳು ಮೊಳಗಿದವು. ದೇವಾಲಯದಲ್ಲಿ ಕ್ಷೀರಾಭಿಷೇಕ, ಅರ್ಚನೆಗಳು ನಡೆದವು.

ಬಾಡೂಟದ ಪರಿಷೆ: ಕರಗ ಮಹೋತ್ಸವದ ನಿಮಿತ್ತ ಮಗವಾಗಿ ಮಂಗಳವಾರ ಬಾಡೂಟದ ಪರಿಷೆ ಏರ್ಪಡಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

ಭಕ್ತರು ಅಡುಗೆ ಸಿದ್ದಪಡಿಸಿ ಊಟ ಬಡಿಸಿದರು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಸಹಸ್ರಾರು ಭಕ್ತರು ಬಾಡೂಟ ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.