
ಮೇಲುಕೋಟೆ: ಕೋತಿಗಳು ನಾಗರೀಕರು ಹಾಗೂ ಭಕ್ತರಿಗೆ ಉಪಟಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ಕೋತಿ ಹಿಡಿಯುವ ಕಾರ್ಯಾಚರಣೆ ಆರಂಭವಾಯಿತು.
1000ಕ್ಕೂ ಹೆಚ್ಚು ಮಂಗಳು ಇಲ್ಲಿದ್ದು, ಆಹಾರಕ್ಕಾಗಿ ಭಕ್ತರ ಮೇಲೆ ದಾಳಿ ಮಾಡುತ್ತಿದ್ದವು. ಮನೆಗಳ ಬಳಿ ಬಂದು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ಕೋತಿಗಳನ್ನು ಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿಸಿದ್ದರು. ಅದರಂತೆ ಗ್ರಾಮ ಪಂಚಾಯಿತಿ ಮತ್ತು ದೇವಾಲಯದ ಆಡಳಿತ ಮಂಡಳಿಗಳು ಜಂಟಿ ಸಹಭಾಗಿತ್ವದಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆ ನೀಡಿವೆ. ಎರಡು ದಿನಗಳ ಕಾರ್ಯಾಚರಣೆಯಲ್ಲಿ 85ಕ್ಕೂ ಹೆಚ್ಚು ಕೋತಿಗಳನ್ನು ಸೆರೆಹಿಡಿಯಲಾಯಿತು.
ದೇವಾಲಯದ ಇಒ ಶೀಲಾ ಅವರು ಮಾಹಿತಿ ನೀಡಿ, ‘ಕೋತಿಗಳು ಇತ್ತೀಚೆಗೆ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ದಾಳಿ ಮಾಡಿ ಗಾಯಗೊಳಿಸವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಹೀಗಾಗಿ ಮಂಗಗಳನ್ನು ಹಿಡಿದು ಅಭಯಾರಣ್ಯಗಳಿಗೆ ಬಿಡುವ ಕಾರ್ಯಾಚರಣೆ ಆರಂಭಿಸಿದ್ದೇವೆ. ಒಂದು ವಾರ ಇಲ್ಲವೇ ಹತ್ತು ದಿವಸ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಲಾಗುತ್ತದೆ. ಸೆರೆಸಿಕ್ಕ ಮಂಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುತ್ತದೆ, ಮಂಗಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತಿದೆ’ ಎಂದರು.
‘ಮೇಲುಕೋಟೆ ಮತ್ತು ಸುತ್ತಮುತ್ತ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಹೊರಗಿನಿಂದ ಕೋತಿಗಳನ್ನು ತಂದು ಬಿಟ್ಟರೆ ಕಠಿಣ ಕ್ರಮ ಜರುಗಿಸಲಾಗುವುದು. ಭಕ್ತರು ಕೋತಿಗಳ ಕಾಟವಿಲ್ಲದೆ ದರ್ಶನ ಮಾಡುವ ವಾತಾವರಣ ನಿರ್ಮಿಸಲು ಗ್ರಾಮ ಪಂಚಾಯಿತಿ ಸಂಕಲ್ಪಮಾಡಿದೆ ಎಂದು ಪಿಡಿಒ ರಾಜೇಶ್ವರ ತಿಳಿಸಿದರು.
ಉಪರಾಷ್ಟ್ರಪತಿಗಳ ಭೇಟಿಯ ದಿವಸ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯರಿಗೆ ಮನವಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.