ADVERTISEMENT

ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಯ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 23:08 IST
Last Updated 3 ಏಪ್ರಿಲ್ 2025, 23:08 IST
ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕಲ್ಯಾಣೋತ್ಸವ ನಡೆಯಿತು
ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕಲ್ಯಾಣೋತ್ಸವ ನಡೆಯಿತು   

ಮೇಲುಕೋಟೆ: ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥ ಚೆಲುವನಾರಾಯಣ ಸ್ವಾಮಿ ಹಾಗೂ ಕಲ್ಯಾಣಿ ನಾಯಕಿ ಅಮ್ಮನವರ ಕಲ್ಯಾಣೋತ್ಸವ ಪಂಚ ಕಲ್ಯಾಣಿಯ ಧಾರಾ ಮಂಟಪದಲ್ಲಿ ಗುರುವಾರ ರಾತ್ರಿ ವೈಭವದಿಂದ ನೆರವೇರಿತು.

ಜಾತ್ರಾ ಮಹೋತ್ಸವದ ನಿಮಿತ್ತ ಪಂಚ ಕಲ್ಯಾಣಿಯ ಧಾರಾ ಮಂಟಪವನ್ನು ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್‌ ದೀಪಾಲಂಕಾರ ಮಾಡಿದ್ದು, ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಸ್ವಾಮಿ ಹಾಗೂ ದೇವಿ ಉತ್ಸವ ಮೂರ್ತಿಗಳಿಗೆ ಧಾರ್ಮಿಕ ಸಮನ್ಮಾಲೆ, ಲಾಜಹೋಮದ ಶಾಸ್ತ್ರೋಕ್ತ ವಿಧಿ ವಿಧಾನದೊಂದಿಗೆ ಪೂಜಾ ಕೈಂಕರ್ಯ ನೆರವೇರಿದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ವೈಭವದಿಂದ ಜರುಗಿತು. ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.

ವಿಶೇಷ ಪುಷ್ಪಗಳಿಂದ ಅಲಂಕೃತಗೊಂಡ ಚೆಲುವನಾರಾಯಣ ಸ್ವಾಮಿ ಹಾಗೂ ದೇವಿಯ ಉತ್ಸವ ಮಂಗಳ ವಾದ್ಯಗೋಷ್ಠಿ, ಸಪ್ತ ನಾದಸ್ವರದೊಂದಿಗೆ ರಾಜಬೀದಿಯ ಮೂಲಕ ದೇವಾಲಯದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಸಂಜೆ 7ಕ್ಕೆ ಕಲ್ಯಾಣಿ ತಲುಪಿತು. ಕಲ್ಯಾಣೋತ್ಸವ ಬಳಿಕ ರಾತ್ರಿ 9 ನಂತರ ಉತ್ಸವ ಮರಳಿ ದೇವಾಲಯ ತಲುಪಿತು.

ADVERTISEMENT

ಕಲ್ಯಾಣೋತ್ಸವದ ದಿನದಂದು ಕ್ಷೇತ್ರದಲ್ಲಿ ಮಳೆ ಸಿಂಚನವಾಯಿತು. ಹೊಸ ವರ್ಷ ಭಕ್ತರಲ್ಲಿ ಶುಭ ಸಂಕೇತ ತಂದಿತು.

ಮೈಸೂರು ಮಹಾರಾಜರಿಗೆ ಮನವಿ:

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ, ರಾಜರ ಆಳ್ವಿಕೆಯಲ್ಲಿ ವೈರಮುಡಿ ಕಿರೀಟ ಮೈಸೂರು ಅರಮನೆಯ ಖಜಾನೆಯಿಂದಲೇ ಶ್ರೀರಂಗಪಟ್ಟಣ ಮಾರ್ಗವಾಗಿ ಮೇಲುಕೋಟೆಗೆ ತಂದು ಅರಸರ ನೇತೃತ್ವದಲ್ಲೇ ಬ್ರಹ್ಮೋತ್ಸವ ನಡೆಯುತ್ತಿತು. ಇಡೀ ರಾಜಕುಟುಂಬವೇ ವಾಸ್ತವ್ಯ ಹೂಡಿ ಬ್ರಹ್ಮೋತ್ಸವವನ್ನು ಕಣ್ತುಂಬಿಕೊಳ್ಳುತ್ತಿತ್ತು. ಕಾಲಕ್ರಮೇಣ ಬ್ರಹ್ಮೋತ್ಸವಕ್ಕೆ ಮೈಸೂರು ಮನೆತನ ಆಗಮಿಸದೇ ಇರುವುದು ಜನರಲ್ಲಿ ಬೇಸರ ಉಂಟುಮಾಡಿದೆ. ಈ ಬಾರಿಯಾದರೂ ರಾಜರು ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸಬೇಕು ಎಂಬುದು ಸ್ಥಳೀಯರು ಹಾಗೂ ಭಕ್ತರ ಆಗ್ರಹವಾಗಿದೆ.

ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕಲ್ಯಾಣೋತ್ಸವ ನಡೆಯಿತು
ವೈರಮುಡಿ ಉತ್ಸವದ ನಿಮಿತ್ತ ಮೇಲುಕೋಟೆಯ ಪಂಚ ಕಲ್ಯಾಣಿ ದೀಪಗಳಲ್ಲಿ ಕಂಗೊಳಿಸಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.