ಮೇಲುಕೋಟೆ: ‘ಮೊದಲನೇ ವೈಕುಂಠ’ ಎಂದೇ ಪ್ರಸಿದ್ಧಿ ಪಡೆದಿರುವ ಚೆಲುವನಾರಾಯಣಸ್ವಾಮಿ ನೆಲೆವೀಡು ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಿದ್ದು ಮೇಲುಕೋಟೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಇದೇ ಏ.7ರಂದು ಸೋಮವಾರ ರಾತ್ರಿ ನಡೆಯುವ ಸಂಭ್ರಮವನ್ನು ಕಣ್ತುಂಬಿಗೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವಜ್ರಖಚಿತ ವೈರಮುಡಿ ಕಿರೀಟಧಾರಣೆಯ ಬ್ರಹ್ಮೋತ್ಸವ ಐತಿಹಾಸಿಕವಾಗಿದ್ದು ಸತ್ಯಯುಗ, ದ್ವಾಪರಯುಗ ಹಾಗೂ ತ್ರೇತಾಯುಗದ ಹಿನ್ನೆಲೆ ಹೊಂದಿದೆ.
ಚೆಲುವನಾರಾಯಣಸ್ವಾಮಿ ಧರಿಸುವ ಕಿರೀಟ ಆಭರಣವು ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ಕಿರೀಟ ಎಂದು ಪ್ರಾಚ್ಯವಸ್ತು ಇಲಾಖೆ, ಧಾರ್ಮಿಕ ಧತ್ತಿ ಇಲಾಖೆ ತಿಳಿಸಿದೆ. ವೈರಮುಡಿ ಕಿರೀಟವು ಸಂಪೂರ್ಣವಾಗಿ ವೃತ್ತಾಕಾರದಲ್ಲಿ ಮಾಡಲಾಗಿದೆ. ಕಿರೀಟದ ಸುತ್ತಲೂ ನೂರಾರು ವಜ್ರ ಮತ್ತು ಅತಿ ಅಮೂಲ್ಯವಾದ ಮಾಣಿಕ್ಯಗಳಿಂದ ಕೂಡಿದೆ. ಕಿರೀಟದ ಮೇಲ್ಭಾಗದಲ್ಲಿ ಕೆಂಪು ಹಾಗೂ ಬಿಳಿಬಣ್ಣದ ವಜ್ರಗಳಿಂದ ತಯಾರಿಸಲಾಗಿದೆ.
ಪುಷ್ಯನಕ್ಷತ್ರದ ಶುಭದಿನ:
ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಪುತ್ರ ರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ ಅರಮನೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಪಟ್ಟಾಭಿಷೇಕ ನಡೆಯಬೇಕು ಎನ್ನುವ ವೇಳೆಗೆ ಕೈಕೇಯಿ ಕುತಂತ್ರದಿಂದ ರಾಮಚಂದ್ರ ವನವಾಸಕ್ಕೆ ತೆರಳಬೇಕಾಯಿತು.
ಆದರೆ, ಅಣ್ಣ ಶ್ರೀರಾಮಚಂದ್ರ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಲಕ್ಷ್ಮಣನಿಗೆ ನಿರಾಸೆಯಾಗಿತ್ತು. ತನ್ನ ಬಯಕೆ ಈಡೇರಿಕೆಗಾಗಿ ಕಲಿಯುಗದಲ್ಲಿ ಲಕ್ಷ್ಮಣ ರಾಮಾನುಜಾಚಾರ್ಯರಾಗಿ ಜನಿಸಿ ಶ್ರೀರಾಮಚಂದ್ರನ ಪಟ್ಟಾಭಿಷೇಕ ನಿಗದಿಯಾಗಿದ್ದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟಧಾರಣೆ ಮಾಡಿ ತನ್ನ ಮನದಲ್ಲಿದ್ದ ಆಸೆ ಈಡೇರಿಸಿಕೊಂಡರು ಎಂಬ ಪ್ರತೀತಿಯಿದೆ. ಇಂದಿಗೂ ಆದೇ ಮಾಸ ಅದೇ ನಕ್ಷತ್ರದಂದು ವೈರಮುಡಿ ಕಿರೀಟಧಾರಣೆ ಮಹೋತ್ಸವ ನಡೆಯುವುದು ವಿಶೇಷ.
ಗರುಡದೇವನಿಂದ ಕಿರೀಟಧಾರಣೆ:
ದ್ವಾಪರ ಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯಸ್ವಾಮಿಗೆ ಗರುಡದೇವನಿಂದ ಕಿರೀಟ ತೊಡಿಸಲಾಗಿದೆ ಎಂಬ ಪ್ರತೀತಿ ಇದೆ. ಇನ್ನೊಂದೆಡೆ ವೈಕುಂಠದಿಂದ ವಿರೋಚನ ಎಂಬ ರಾಕ್ಷ ಕದ್ದಿದ್ದ ಕಿರೀಟವನ್ನು ಗರುಡದೇವನು ಹೋರಾಟ ಮಾಡಿ ಮರಳಿ ಚೆಲುವನಾರಾಯಣಸ್ವಾಮಿಗೆ ಅರ್ಪಿಸಿದನೆಂಬ ನಂಬಿಕೆಯಿದೆ. ಇಂದಿಗೂ ಗರುಡದೇವನ ಹೆಗಲ ಮೇಲೆ ಚೆಲುವನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಇಟ್ಟು ವೈರಮುಡಿ ಬ್ರಹ್ಮೋತ್ಸವ ನಡೆಸಲಾಗುತ್ತಿದೆ.
ಅಚ್ಚರಿಯ ವಿಚಾರವೆಂದರೆ, ಹಿಂದಿನಿಂದ ಇಂದಿನವರೆಗೂ ವೈರಮುಡಿ ಕಿರೀಟಕ್ಕೆ ಸೂರ್ಯನ ಕಿರಣಗಳ ಸ್ವರ್ಶವೇ ಆಗಿಲ್ಲ. ಬ್ರಹ್ಮೋತ್ಸವ ನಂತರ ಕಿರೀಟ ತೆಗೆದು ಸೂರ್ಯಕಿರಣ ಬೀಳದ ಪೆಟ್ಟಿಗೆಯಲ್ಲಿ ಭದ್ರಪಡಿಸಿ ಮಂಡ್ಯ ಜಿಲ್ಲಾ ಖಜಾನೆಗೆ ರವಾನಿಸಲಾಗುತ್ತದೆ. ಮುಂದಿನ ವರ್ಷದವರೆಗೂ ಕಿರೀಟ ಪೆಟ್ಟಿಗೆ ಮಂಡ್ಯ ಖಜಾನೆಯಲ್ಲಿ ಇರುತ್ತದೆ ಎನ್ನುತ್ತಾರೆ ಪುರೋಹಿತರು.
ವೃತ್ತಾಕಾರದಲ್ಲಿರುವ ವೈರಮುಡಿ ಕಿರೀಟದಲ್ಲಿ ನಾಗಮಣಿ ಅಳವಡಿಸಲಾಗಿದೆ. ಆದ್ದರಿಂದ ವೈರಮುಡಿ ಬ್ರಹ್ಮೋತ್ಸವದ ಕಣ್ತುಂಬಿಕೊಳ್ಳಲು ಹಾಗೂ ದರ್ಶನ ಮಾಡಲು ದೇವಾನುದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಭಕ್ತರದ್ದು.
ಬ್ರಹ್ಮದೇವ ಪ್ರತಿನಿತ್ಯ ವೈರಮುಡಿ ಕಿರೀಟವನ್ನು ಪೂಜೆ ಮಾಡುತ್ತಿದ್ದರು. ಅತಿಸುಂದರನಾದ ಚೆಲುವನಿಗೆ ಅರ್ಪಿಸಿದ್ದರು. ಆದ್ದರಿಂದ ವೈರಮುಡಿ ಕಿರೀಟದಿಂದಲೇ ಮೇಲುಕೋಟೆ ದೇವಾಲಯ ಪ್ರಖ್ಯಾತಗೊಂಡಿದೆ– ರಾಮಪ್ರಿಯ ಸಂಪತ್ ಕುಮಾರ್ ದೇವಾಲಯದ ಪುರೋಹಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.