ADVERTISEMENT

‘ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ: ಸಿಎಂ ಜತೆ ಚರ್ಚೆ’

​ಪ್ರಜಾವಾಣಿ ವಾರ್ತೆ
Published 24 ಮೇ 2022, 4:50 IST
Last Updated 24 ಮೇ 2022, 4:50 IST
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್‌ ಅತಿವೃಷ್ಠಿ ಸಂತ್ರಸ್ತ ರೈತರ ಜತೆ ಚರ್ಚಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್‌ ಅತಿವೃಷ್ಠಿ ಸಂತ್ರಸ್ತ ರೈತರ ಜತೆ ಚರ್ಚಿಸಿದರು   

ಶ್ರೀರಂಗಪಟ್ಟಣ: ಈಚೆಗೆ ಸುರಿದ ಮಳೆಯಿಂದ ಮನೆ, ಬೆಳೆ ಇತರ ಆಸ್ತಿ ಕಳೆದುಕೊಂಡಿರುವ ಅತಿವೃಷ್ಟಿ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಸಂಸದೆ ಸುಮಲತಾ ಅಂಬರೀಶ್‌ ತಿಳಿಸಿದರು.

ತಾಲ್ಲೂಕಿನ ಚಂದಗಿರಿಕೊಪ್ಪಲು ಮತ್ತು ಬಲ್ಲೇನಹಳ್ಳಿಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲ ಎಂಬ ದೂರುಗಳಿವೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ನನ್ನ ಒತ್ತಾಯವೂ ಆಗಿದೆ ಎಂದರು.

ADVERTISEMENT

ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳು ಸಕಾಲಕ್ಕೆ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಶೀಘ್ರ ಕಳುಹಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ರೈತರು ಗಮನ ಸೆಳೆದರು.

ಚಂದಗಿರಿಕೊಪ್ಪಲು– ಬಲ್ಲೇನಹಳ್ಳಿ ನಡುವೆ ಅಟ್ಟೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ರೈತ ಮಹಿಳೆ ಸಾವಿತ್ರಮ್ಮ, ಜ್ಞಾನೇಶ್‌, ಗೋಪಾಲ್‌ ಮನವಿ ಮಾಡಿದರು. ಮುಖಂಡರಾದ ಇಂಡುವಾಳು ಸಚ್ಚಿದಾನಂದ, ದರ್ಶನ್‌ ಲಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.