
ಮಂಡ್ಯ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಹೆಸರನ್ನು ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್’ (ವಿಬಿ ಜಿ ರಾಮ್ ಜಿ) ಎಂದು ಬದಲಾಯಿಸಿರುವುದನ್ನು ವಿರೋಧಿಸಿ ಸಿಐಟಿಯು ಕಾರ್ಯಕರ್ತರು ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿ ಎದುರು ಕಪ್ಪುಬಟ್ಟೆ ಪ್ರದರ್ಶಿಸಿ ಶುಕ್ರವಾರ ‘ವಿಬಿ ಜಿ ರಾಮ್ ಜಿ ಯೋಜನೆ ಗೋ ಬ್ಯಾಕ್’ ಚಳವಳಿ ನಡೆಸಿದರು.
ಗ್ರಾಮ ಪಂಚಾಯಿತಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಕಾರ್ಯದರ್ಶಿ ಕೆ.ಎನ್. ಪವಿತ್ರಾ ಅವರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಹಿಂದೆ ಇದ್ದ ನರೇಗಾ ಯೋಜನೆಯನ್ನೇ ಮುಂದುವರಿಸಬೇಕು. ಸ್ವಾತಂತ್ರ್ಯ ಚಳವಳಿಯ ನೇತಾರರಾದ ಮಹಾತ್ಮ ಗಾಂಧೀಜಿ ಹೆಸರನ್ನು ಕೇಂದ್ರ ಸರ್ಕಾರವು ಬದಲಾಯಿಸುವ ಮೂಲಕ ಗಾಂಧೀಜಿ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದರು.
ಕಾಯ್ದೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಅವುಗಳು ಬಡವರ ಹಾಗೂ ಕೂಲಿಕಾರದ ವಿರೋಧಿಯಾಗಿವೆ. ಬಿತ್ತನೆ ಮತ್ತು ಕಠಾವಿನ ನೆಪದಲ್ಲಿ ಉದ್ಯೋಗ ಖಾತ್ರಿ ಕೆಲಸವನ್ನು 60 ದಿನಗಳು ನಿಲ್ಲಿಸುವುದು ಹಾಗೂ ರಾಜ್ಯ ಸರ್ಕಾರಗಳು ಯೋಜನೆಗೆ ಶೇ 40ರಷ್ಟು ನೀಡಬೇಕೆನ್ನುವುದು ಈ ಯೋಜನೆ ನಿಷ್ಕ್ರಿಯಗೊಳಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ಮೊದಲು ನೀಡುತ್ತಿದ್ದ ಶೇ 60ರಷ್ಟು ಅನುದಾನವನ್ನು ಮುಂದುವರಿಸಬೇಕು. ದಿನಕ್ಕೆ ₹600 ಕೂಲಿ, ವರ್ಷದಲ್ಲಿ 200 ದಿನಗಳ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಪ್ರೇಮಾ, ರೇಣುಕಾ, ಶೋಭಾ, ಸುಷ್ಮಾ, ಮಧು, ಸೋಮಶೇಖರ್, ಕುಮಾರ್, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.