ADVERTISEMENT

ಕಿಕ್ಕೇರಿ | ಭ್ರಷ್ಟಾಚಾರ ಆರೋಪ: ಹಾಲು ಸುರಿದು ಆಕ್ರೋಶ

ಐಕನಹಳ್ಳಿ ಕೊಪ್ಪಲು ಸಹಕಾರ ಸಂಘದ ಷೇರುದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:51 IST
Last Updated 7 ಅಕ್ಟೋಬರ್ 2025, 5:51 IST
ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರು ಡೇರಿ ಅಧ್ಯಕ್ಷೆ ಮನೆ ಮುಂದೆ ಸೋಮವಾರ ಹಾಲು ಸುರಿದು ಪ್ರತಿಭಟಿಸಿದರು 
ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರು ಡೇರಿ ಅಧ್ಯಕ್ಷೆ ಮನೆ ಮುಂದೆ ಸೋಮವಾರ ಹಾಲು ಸುರಿದು ಪ್ರತಿಭಟಿಸಿದರು    

ಕಿಕ್ಕೇರಿ: ‘ಹೋಬಳಿಯ ಐಕನಹಳ್ಳಿ ಕೊಪ್ಪಲು ಗ್ರಾಮದ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ಆಗಲಿ’ ಎಂದು ಒತ್ತಾಯಿಸಿ ಷೇರುದಾರರು, ಹಾಲು ಉತ್ಪಾದಕ ರೈತರು ಡೇರಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಮನೆ ಮುಂದೆ ಸೋಮವಾರ ಹಾಲು ಸುರಿದು ಪ್ರತಿಭಟನೆ ನಡೆಸಿದರು. 

‘ಡೇರಿ ಕಾರ್ಯದರ್ಶಿ ಯಶೋಧಾ ದೇವೇಗೌಡ ಹಾಗೂ ಅಧ್ಯಕ್ಷೆ ರಾಧಾ ಕುಮಾರ್ ಅವರು ಸಂಬಂಧಿಕರಾಗಿದ್ದಾರೆ. ಸಂಘದಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ಸೂಕ್ತ ತನಿಖೆಗಾಗಿ ದೂರು ನೀಡಲಾಗಿದೆ. ತಪ್ಪಿತಸ್ಥರಾಗುವ ಭಯದಿಂದ ಸಂಘದಲ್ಲಿರುವ ನಿರ್ದೇಶಕರಿಗೆ ತಿಳಿಯದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏಕಾ‌ಏಕಿ ಇವರ ಗೈರಿನಿಂದ ಹಾಲು ಉತ್ಪಾದಕರಿಗೆ ತೊಂದರೆಯಾಗುತ್ತಿದೆ’ ಎಂದು ರೈತ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

‘ಡೇರಿಗೆ ನಾಲ್ಕೈದು ದಿನಗಳಿಂದ ಕಾರ್ಯದರ್ಶಿ ಬಾರದ ಕಾರಣ ಹಾಲು ವಿತರಣೆಯ ಕಂಪ್ಯೂಟರ್ ಬಿಲ್ ಸಿಗುತ್ತಿಲ್ಲ. ಎಷ್ಟು ಹಾಲು ಹಾಕಿದೆ, ಇದರ ಹಣದ ಮಾಹಿತಿ ಸಿಗದಾಗಿದೆ. ಇವರ ದುಂಡಾವರ್ತನೆಯಿಂದ ಷೇರುದಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಆಗಬೇಕು’ ಎಂದು ಮುಖಂಡ ಕಾಂತರಾಜು ಒತ್ತಾಯಿಸಿದರು.

ADVERTISEMENT

ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಮನೆಗೆ ಮುತ್ತಿಗೆ ಹಾಕಿದ ಷೇರುದಾರರು, ರೈತರು ಡೇರಿಗೆ ವಿತರಿಸಲು ಕ್ಯಾನ್‌ನಲ್ಲಿ ತಂದಿದ್ದ ಸುಮಾರು 450 ಲೀಟರ್ ಹಾಲನ್ನು ಸುರಿದು ಕಿಡಿ ಕಾರಿದರು.

ಮುಖಂಡರಾದ ಕಾಂತರಾಜು, ನಾಗರಾಜು, ಪ್ರದೀಪ್, ಗುಂಡ, ಮಂಜಣ್ಣ, ಆನಂದ, ರವಿ, ವೆಂಕಟೇಶ, ನಾಗೇಶ್, ಮಂಜಣ್ಣ, ದಿವಾಕರ, ಪ್ರಸನ್ನ, ದಿಲೀಪ್, ಪ್ರಕಾಶ್, ಸಾಗರ್, ಜಯಮ್ಮ ಭಾಗವಹಿಸಿದ್ದರು.

‘ಡೇರಿ ಅಧ್ಯಕ್ಷರು ಅನಾರೋಗ್ಯದಿಂದ ರಾಜೀನಾಮೆ ನೀಡಿದ್ದಾರೆ, ನನ್ನಿಂದ ಯಾವುದೇ ಅನ್ಯಾಯ, ಮೋಸವಾಗಿದ್ದರೆ ಮೇಲಾಧಿಕಾರಿಗಳು ತನಿಖೆ ಮಾಡಲಿ’ ಎಂದು 
ಡೇರಿ ಕಾರ್ಯದರ್ಶಿ ಯಶೋಧಾ ದೇವೇಗೌಡ ಪ್ರತಿಕ್ರಿಯಿಸಿದರು.

ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರು ಡೇರಿ ಕಾರ್ಯದರ್ಶಿ ಅಧ್ಯಕ್ಷೆ ಮನೆ ಮುಂದೆ ಸೋಮವಾರ ಹಾಲು ಸುರಿದು ನ್ಯಾಯಕ್ಕಾಗಿ ಪ್ರತಿಭಟಿಸಿದರು. ಮೂರ್ತಿ ಕಾಂತರಾಜು ನಾಗರಾಜು ಪ್ರದೀಪ್ ಗುಂಡ ಮಂಜಣ್ಣ ಆನಂದ ರವಿ ವೆಂಕಟೇಶ ನಾಗೇಶ್ ಜಯಮ್ಮ ಮತ್ತಿತರರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.