ADVERTISEMENT

ಮಂಡ್ಯ | ಮಿಮ್ಸ್‌ ಮುಖ್ಯಸ್ಥರ ಕಿತ್ತಾಟ; ರೋಗಿಗಳ ಪರದಾಟ

ಕೋರ್ಟ್‌ ಮೆಟ್ಟಿಲೇರಿದ ನೇಮಕಾತಿ; ಸಿಗದ ವೈದ್ಯರು, ವಿದ್ಯಾರ್ಥಿಗಳ ಮೇಲೆ ಅವಲಂಬಿತವಾದ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 6:21 IST
Last Updated 20 ಫೆಬ್ರುವರಿ 2024, 6:21 IST
ಮಿಮ್ಸ್‌ ಆಸ್ಪತ್ರೆ (ಸಂಗ್ರಹ ಚಿತ್ರ)
ಮಿಮ್ಸ್‌ ಆಸ್ಪತ್ರೆ (ಸಂಗ್ರಹ ಚಿತ್ರ)   

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ನಿರ್ದೇಶಕರು ಹಾಗೂ ವೈದ್ಯಕೀಯ ಅಧೀಕ್ಷಕರ ನೇಮಕಾತಿ ಗೊಂದಲಗಳು ವಿಕೋಪಕ್ಕೆ ಹೋಗಿದ್ದು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಆಸ್ಪತ್ರೆ ನಿರ್ವಹಣೆ ಮಾಡಬೇಕಾದ ಮುಖ್ಯಸ್ಥರ ಕಿತ್ತಾಟದಿಂದಾಗಿ ರೋಗಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಿಮ್ಸ್‌ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ದಾವೆ ಹೂಡಲಾಗಿದೆ. ಮಹೇಂದ್ರ ಅವರ ಅನಾರೋಗ್ಯ ಕಾರಣಕ್ಕೆ ನೇಮಕ ಮಾಡಿದ್ದ ಹೆಚ್ಚುವರಿ ನಿರ್ದೇಶಕರ ಆಯ್ಕೆಗೂ ತಡೆಯಾಜ್ಞೆ ತರಲಾಗಿದೆ. ಇನ್ನೊಂದೆಡೆ ವೈದ್ಯಕೀಯ ಅಧೀಕ್ಷಕರ ಆಯ್ಕೆಗೂ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಗಿದೆ.

ಆಸ್ಪತ್ರೆ ಕಾರ್ಯನಿರ್ವಹಣೆಗೆ ಮುಖ್ಯವಾಗಿ ಬೇಕಿರುವ ನಿರ್ದೇಶಕ ಹಾಗೂ ವೈದ್ಯಕೀಯ ಅಧೀಕ್ಷಕ ಹುದ್ದೆಗಳೇ ಇಕ್ಕಟ್ಟಿನಲ್ಲಿರುವ ಕಾರಣ ಇಡೀ ಆಸ್ಪತ್ರೆ ಆವರಣ ಗೊಂದಲದ ಗೂಡಾಗಿದೆ. ಇದು ರೋಗಿಗಳ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತಿದ್ದು ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆ ಸೇವೆಗಳು ಸಿಗದೇ ರೋಗಿಗಳು ಮೈಸೂರು, ಬೆಂಗಳೂರು ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಆಸ್ಪತ್ರೆಗೆ ಹಾಜರಾಗುತ್ತಿಲ್ಲ, ಬಯೋಮೆಟ್ರಿಕ್‌ ಹಾಜರಾತಿ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಎಚ್‌ಒಡಿ, ತಜ್ಞ ವೈದ್ಯರು ಹಾಜರಿ ಹಾಕಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ತೆರಳುತ್ತಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಂದ ಆಸ್ಪತ್ರೆ ನಡೆಯುತ್ತಿದೆ’ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಏನಿದು ಗೊಂದಲ?: ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಅವರು ನೇಮಕಗೊಂಡಾಗ ಅವರ ನೇಮಕಾತಿ ಪ್ರಶ್ನಿಸಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ನರಸಿಂಹಮೂರ್ತಿ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ದಾವೆ ಪರಿಗಣಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಡಾ.ಮಹೇಂದ್ರ ನೇಮಕಾತಿ ಕಾನೂನುಬಾಹಿರ ಎಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಬಿ.ಜೆ.ಮಹೇಂದ್ರ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ನಡುವೆ ಬಿ.ಜೆ.ಮಹೇಂದ್ರ ಅನಾರೋಗ್ಯಕ್ಕೆ ತುತ್ತಾಗಿ ದೀರ್ಘ ರಜೆ ಪಡೆದಿದ್ದರು. ಈ ಅವಧಿಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ತಮ್ಮಣ್ಣ ಅವರನ್ನು ನೇಮಕ ಮಾಡಲಾಗಿತ್ತು. ತಮ್ಮಣ್ಣ ಆಯ್ಕೆ ಪ್ರಶ್ನಿಸಿ ಡಾ.ನರಸಿಂಹಸ್ವಾಮಿ ತಡೆಯಾಜ್ಞೆ ತಂದಿದ್ದಾರೆ.

ಅನಾರೋಗ್ಯ ರಜೆಯನ್ನು ಅರ್ಧಕ್ಕೆ ಕಡಿತಗೊಳಿಸಿರುವ ಡಾ.ಮಹೇಂದ್ರ ಕಳೆದೆರಡು ದಿನದಿಂದ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಕಚೇರಿಗೆ ಹಾಜರಾಗದ ಕಾರಣ ಆಸ್ಪತ್ರೆ ಚಟುವಟಿಕೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.

ಇನ್ನೊಂದೆಡೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್‌ ಆಯ್ಕೆ ಪ್ರಶ್ನಿಸಿ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್‌ ತಡೆಯಾಜ್ಞೆ ತಂದಿದ್ದಾರೆ. ಆಸ್ಪತ್ರೆ ಕಾರ್ಯನಿರ್ವಹಣೆಗೆ ಮುಖ್ಯವಾದ ವೈದ್ಯಕೀಯ ಅಧೀಕ್ಷಕ ಹುದ್ದೆಯೂ ಸಮಸ್ಯೆಯಲ್ಲಿರುವ ಕಾರಣ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಾಗಿಲ್ಲ.

‘ಮಿಮ್ಸ್‌ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವೈದ್ಯರ ಕಳ್ಳಾಟ ತೀವ್ರಗೊಂಡಿದೆ. ಮಿಮ್ಸ್‌ ಆಸ್ಪತ್ರೆಗೆ ಬರುವ ರೋಗಿಗಳನ್ನು ನರ್ಸಿಂಗ್‌ ಹೋಂಗಳಲ್ಲಿ ದಾಖಲು ಮಾಡಿಕೊಳ್ಳುತ್ತಿರುವ ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಕರುನಾಡು ಸೇವಕರು ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

ಮಿಮ್ಸ್‌ ಮುಖ್ಯಸ್ಥರ ಕಿತ್ತಾಟದಿಂದ ರೋಗಿಗಳಿಗೆ ತೊಂದರೆಯಾಗಬಾರದು. ಈ ಕುರಿತು ಪರಿಶೀಲಿಸಿ ಜನರಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲಾಗುವುದು
– ಕುಮಾರ ಜಿಲ್ಲಾಧಿಕಾರಿ
ಇಲ್ಲಿ ಪ್ರಾಧ್ಯಾಪಕ ಅಲ್ಲಿ ನಿರ್ದೇಶಕ
ಮಿಮ್ಸ್‌ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಹರೀಶ್‌ ಅವರು ಚಿಕ್ಕಮಗಳೂರು ಜಿಲ್ಲೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಆದರೆ ಅವರು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಅನುಮತಿ ಪಡೆಯದೇ ಹೊಸ ಹುದ್ದೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇಂದಿಗೂ ಡಾ.ಹರೀಶ್‌ ಚರ್ಮರೋಗ ವಿಭಾಗದ ಪ್ರಾಧ್ಯಾಪಕರಾಗಿಯೇ ಮುಂದುವರಿಯುತ್ತಿದ್ದು ಸ್ನಾತಕೋತ್ತರ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪರೀಕ್ಷೆ ಹಾಗೂ ಎನ್‌ಎಂಸಿ ಪರಿಶೀಲನೆ ವೇಳೆ ಮಾತ್ರ ಮಿಮ್ಸ್‌ಗೆ ಹಾಜರಾಗುತ್ತಿದ್ದು ಉಳಿದಂತೆ ಚಿಕ್ಕಮಗಳೂರಿಗೆ ತೆರಳುತ್ತಾರೆ. ಹೀಗಾಗಿ ಅವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.