ADVERTISEMENT

ಸೋಂಕಿತರಿಂದ ದೂರು, ಕ್ಷಮೆಯಾಚಿಸಿದ ಸಚಿವ

ಮಳವಳ್ಳಿಗೆ ಭೇಟಿ ನೀಡಿದ ಕೆ.ಸಿ.ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 4:42 IST
Last Updated 26 ಏಪ್ರಿಲ್ 2021, 4:42 IST
ಮಳವಳ್ಳಿ ಪಟ್ಟಣದ ಹೊರವಲಯದ ಕೆಎಸ್ಆರ್‌ಟಿಸಿ ತರಬೇತಿ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿದರು
ಮಳವಳ್ಳಿ ಪಟ್ಟಣದ ಹೊರವಲಯದ ಕೆಎಸ್ಆರ್‌ಟಿಸಿ ತರಬೇತಿ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿದರು   

ಮಳವಳ್ಳಿ: ತಾಲ್ಲೂಕಿನ ಕೋವಿಡ್ ಕೇರ್‌ ಕೇಂದ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಹೊರವಲಯದ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ವಡ್ಡರಹಳ್ಳಿ ವಸತಿ ನಿಲಯದ ಕೋವಿಡ್ ಕೇಂದ್ರಗಳಿಗೆ ಉಪವಿಭಾಗಾಧಿಕಾರಿ ಐಶ್ವರ್ಯಾ, ತಹಶೀಲ್ದಾರ್ ಎಂ.ವಿಜಯಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೋಂಕಿತರ ಸಮಸ್ಯೆ ಆಲಿಸಿದರು.

ಶಾಸಕ ಡಾ.ಕೆ.ಅನ್ನದಾನಿ ಮಾತ ನಾಡಿ, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬೇಕಾದರೆ ಸರ್ಕಾರ ಒಂದು ವಾರದ ಅವಧಿಗಾದರೂ ಪೂರ್ಣ ಪ್ರಮಾಣದ ಲಾಕ್ ಡೌನ್ ಜಾರಿ ಮಾಡಬೇಕು. ವೈದ್ಯರು ಸೋಂಕಿತರನ್ನು ಖುದ್ದು ಭೇಟಿ ನೀಡಲು ಸೂಚನೆ ನೀಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ADVERTISEMENT

ಸಚಿವರ ಕ್ಷಮೆ: ಕೋವಿಡ್‌ ಕೇರ್‌ ಕೇಂದ್ರಗಳಿಗೆ ಭೇಟಿ ನೀಡಿದ್ದ ಸಂದರ್ಭ ಬಹುತೇಕ ಸೋಂಕಿತರು ಕಳಪೆ ಗುಣಮಟ್ಟದ ಊಟ, ಬಿಸಿ ನೀರು, ಸ್ವಚ್ಛತೆ ಬಗ್ಗೆ ದೂರು ನೀಡಿದರು. ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ನಾಳೆಯಿಂದ ಉತ್ತಮವಾದ ಆಹಾರ ನೀಡಬೇಕು. ವಾರದಲ್ಲಿ ಮೂರು ದಿನ ಮಾಂಸಾಹಾರಿ ಊಟ ನೀಡುವಂತೆ ಸೂಚನೆ ನೀಡಿದರು. ಆಗಿರುವ ಲೋಪಗಳಿಗೆ ಕ್ಷಮೆ ಯಾಚಿಸುವುದಾಗಿ ತಿಳಿಸಿದರು.

ಕೆಎಸ್ಆರ್‌ಟಿಸಿ ಕೇಂದ್ರಕ್ಕೆ ತಕ್ಷಣವೇ ಎರಡು ಟಿವಿ, ಐದು ಬಿಸಿ ನೀರಿನ ಯಂತ್ರಗಳು, ವೈದ್ಯರು ಖುದ್ದು ಭೇಟಿ ನೀಡುವಂತೆ ನೋಡಿಕೊಳ್ಳಲು ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಗೆ ಸೂಚನೆ ನೀಡಿದರು.

ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಸೋಂಕಿತರ ಆರೈಕೆಗೆ ಸಿದ್ಧವಾಗಿರುವ ಕೇಂದ್ರದ ಶೌಚಾಲಯದ ಅವ್ಯವಸ್ಥೆ ಕಂಡು ಅಧಿಕಾರಿಗಳು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡಿಬೇಕು ಎಂದು ಸೂಚಿಸಿದರು.

ತಾಲ್ಲೂಕಿನ ಸರ್ಕಾರಿ ಶಾಲೆ ಯೊಂದರ 7 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಭಾನುವಾರ ಸೋಂಕು ದೃಢಪಟ್ಟಿದ್ದು, ಕೆಎಸ್ಆರ್‌ಟಿಸಿ ತರಬೇತಿ ಕೇಂದದಲ್ಲಿದ್ದ ಮಕ್ಕಳಿಗೆ ಪ್ರತ್ಯೇಕವಾಗಿ ವಸತಿ ನಿಲಯದಲ್ಲಿ ವ್ಯವಸ್ಥೆ ಕಲ್ಪಿಸ
ಬೇಕು. ಅವರನ್ನು ಹೋಂ ಐಸೋಲೇಸನ್ ಮಾಡದೆ ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ತಹಶೀಲ್ದಾರ್ ಎಂ.ವಿಜಯಣ್ಣ ಅವರಿಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಐಶ್ವರ್ಯಾ, ಡಿವೈಎಸ್‌ಪಿ ಎಚ್.ಲಕ್ಷ್ಮೀನಾರಾಯಣ ಪ್ರಸಾದ್, ತಾ.ಪಂ.ಇಒ ಬಿ.ಎಸ್.ಸತೀಶ್, ಪುರಸಭೆ ಉಪಾಧ್ಯಕ್ಷ ಟಿ.ನಂದಕುಮಾರ್, ಸದಸ್ಯರಾದ ಎಂ.ಎನ್,ಕೃಷ್ಣ, ಎಂ.ಟಿ.ಪ್ರಶಾಂತ್, ನೂರುಲ್ಲಾ, ವಡ್ಡರಹಳ್ಳಿ ಸಿದ್ದರಾಜು, ಪಿಎಲ್‌ಡಿ ನಿರ್ದೇಶಕ ಅಪ್ಪಾಜಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.