ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಮಿ ಅವರು ಮಾಧ್ಯಮಗೋಷ್ಠಿ ನಡೆಸಿದರು.
ಮಂಡ್ಯ: ‘ಸಕ್ಕರೆ ನಗರದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣಾರ್ಥ ‘ಕನ್ನಡ ಭವನ’ ನಿರ್ಮಿಸಲಾಗುವುದು. ಈಗಾಗಲೇ ಜಾಗ ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ₹25 ಕೋಟಿ ಅನುದಾನ ನೀಡಿತ್ತು. ಜತೆಗೆ, ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದರು. ನಿಗಮ ಮಂಡಳಿತ, ಸಂಘ ಸಂಸ್ಥೆಗಳು, ದಾನಿಗಳು ನೆರವು ನೀಡಿದ್ದಾರೆ. ಖಾಸಗಿ ಕಂಪನಿಗಳೂ ಸಿಎಸ್‌ಆರ್ ನಿಧಿಯಲ್ಲಿ ನೆರವು ನೀಡಿವೆ. ಎಲ್ಲ ಹಣವನ್ನು ಒಗ್ಗೂಡಿಸಿ ಅಚ್ಚುಕಟ್ಟಾದ ಸಮ್ಮೇಳನ ನಡೆಸಿದ್ದೇವೆ ಎಂದರು.
ಸಮ್ಮೇಳನದ ಖರ್ಚು-ವೆಚ್ಚದ ಪಟ್ಟಿ ಅಂತಿಮಗೊಂಡಿಲ್ಲ. ಪೂರ್ಣ ಹಣ ಖರ್ಚಾಗಿದೆಯೋ? ಹಣ ಉಳಿದಿದೆಯೋ ಗೊತ್ತಿಲ್ಲ. ಆದರೆ, ಹಣ ಉಳಿಯಲಿ, ಬಿಡಲಿ ಕನ್ನಡ ಭವನವನ್ನು ನಿರ್ಮಿಸುವುದಂತೂ ಶತಸಿದ್ಧ ಎಂದು ಹೇಳಿದರು.
ಸರ್ವರ ಸಹಕಾರದಿಂದ ಯಶಸ್ಸು: 3ನೇ ಬಾರಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ, ಕಸಾಪ ಪದಾಧಿಕಾರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, 28 ಸಮಿತಿಗಳ ಸದಸ್ಯರು, ನಗರ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳು, ಮಾಧ್ಯಮದವರು ಹಾಗೂ ಮಂಡ್ಯ ಜಿಲ್ಲೆಯ ಜನರ ಸಹಕಾರದಿಂದ ಮಾದರಿ ಸಮ್ಮೇಳನ ನಡೆಸಿದ್ದೇವೆ ಎಂದು ಸಚಿವರು ತಿಳಿಸಿದರು.
‘ನಾಡಿನಲ್ಲಿ ಇದುವರೆಗೂ ನಡೆದಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ 20 ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಬಹಳ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆದ ಸಮ್ಮೇಳನವೆಂದರೆ ಮಂಡ್ಯದಲ್ಲಿ ನಡೆದ ಸಮ್ಮೇಳನ ಎಂದು ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
6 ಲಕ್ಷ ಜನ ಭಾಗಿ: ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವಸ್ತು ಪ್ರದರ್ಶನ, ಮಳಿಗೆಗಳು, ಸ್ವಚ್ಛತೆ ಮತ್ತು ನೈರ್ಮಲ್ಯ, ವೇದಿಕೆ ಕಾರ್ಯಕ್ರಮಗಳು ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯು ಬಹಳ ಅಚ್ಚುಕಟ್ಟಾಗಿ ಜರುಗಿತು. ಸಮ್ಮೇಳನದ ಮೂರು ದಿನ ಸುಮಾರು 5ರಿಂದ 6 ಲಕ್ಷ ಜನರು ಭಾಗವಹಿಸಿದ್ದು, ಜನರ ಪಾಲ್ಗೊಳ್ಳುವಿಕೆಯು ಸರೋವರದಂತಿತ್ತು. ಒಟ್ಟು 18 ದೇಶಗಳಿಂದ 250 ವಿದೇಶಿ ಕನ್ನಡಿಗರು ಭಾಗವಹಿಸಿದ್ದು, ಅತ್ಯುತ್ತಮವಾಗಿ ಜರುಗಿದ ಸಮ್ಮೇಳನಕ್ಕೆ ವಿದೇಶಗಳಿಂದ ಪ್ರಸಂಶೆಗಳು ಬರುತ್ತಿವೆ. ಸಮ್ಮೇಳನದಲ್ಲಿ 30ಕ್ಕೂ ಹೆಚ್ಚು ಗೋಷ್ಠಿಗಳು ಬಹಳ ಯಶಸ್ವಿಯಾಗಿ ನಡೆದಿವೆ ಎಂದರು.
450 ಪುಸ್ತಕ ಮಳಿಗೆ: 450ಕ್ಕೂ ಹೆಚ್ಚು ಪುಸ್ತಕ ಮಳಿಗೆ ಹಾಗೂ ಸಾಮಾನ್ಯ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ 450 ಮಳಿಗೆಗಳನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ವೇದಿಕೆ ಕಾರ್ಯಕ್ರಮಗಳಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ರಸ ಸಂಜೆ, ಪೊಲೀಸ್ ಬ್ಯಾಂಡ್, ಜನಪದ ನೃತ್ಯ ಮುಂತಾದವು ಜನರ ಮೆಚ್ಚುಗೆಯನ್ನು ಪಡೆದಿವೆ. ಸಮ್ಮೇಳನ ನಡೆಯುವ ಕಡೆ ಮಾತ್ರ ಮಳೆ ಬಂದು ಹಾರೈಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಪ್ರಚಾರಕ್ಕೆ ಒತ್ತು: ಕನ್ನಡ ರಥ ರಾಜ್ಯದಾದ್ಯಂತ ಸಂಚರಿಸಿ ಹಾಗೂ ಮಂಡ್ಯ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮ್ಮೇಳನದ ಯಶಸ್ವಿಗೆ ಕಾರಣವಾಯಿತು. ಈ ಮೂಲಕ ಹೊರ ಜಿಲ್ಲೆಯವರು ಸಮ್ಮೇಳನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಸಕ ಪಿ.ರವಿಕುಮಾರ್ ಸಾರಥ್ಯದಲ್ಲಿ ನಡೆದ ‘ಕನ್ನಡಕ್ಕಾಗಿ ಓಟ’ ಮ್ಯಾರಥಾನ್ ಕಾರ್ಯಕ್ರಮ ಸಮ್ಮೇಳನದ ಪ್ರಚಾರ ಹಾಗೂ ಯಶಸ್ವಿಗೆ ಪಾತ್ರವಾಗಿದೆ ಎಂದರು.
ಶಾಸಕರಾದ ಪಿ. ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಶುಗರ್ ಕಂಪನಿ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಹೀಂ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ವಿ.ಹರ್ಷ ಪಣ್ಣೆದೊಡ್ಡಿ ಸೇರಿದಂತೆ ಪಾಲ್ಗೊಂಡಿದ್ದರು.
‘ಸಮ್ಮೇಳನಕ್ಕೆ ಸೂಕ್ತ ಸ್ಥಳ ಆಯ್ಕೆ’
‘ಜನರ ಒತ್ತಾಯದ ಮೇರೆಗೆ ಸಾಹಿತ್ಯ ಸಮ್ಮೇಳನವನ್ನು ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಲು ಬಯಸಿದ್ದೆ. ಆದರೆ ಲಕ್ಷಾಂತರ ಜನರಿಗೆ ಮೂಲಸೌಕರ್ಯ ಒದಗಿಸುವುದು ಮತ್ತು ವಾಹನಗಳಿಗೆ ಪಾರ್ಕಿಂಗ್ ಕಲ್ಪಿಸುವುದು ಅಸಾಧ್ಯ ಎಂದು ಜಿಲ್ಲಾಧಿಕಾರಿ ಸಿಇಒ ಮತ್ತು ತಾಂತ್ರಿಕ ತಜ್ಞರು ವರದಿ ನೀಡಿದ ಮೇರೆಗೆ ಸ್ಯಾಂಜೋ ಆಸ್ಪತ್ರೆ ಹಿಂಭಾಗದ 70 ಎಕರೆ ಜಾಗವನ್ನು ಆಯ್ಕೆ ಮಾಡಿದೆವು. ಬಹುಶಃ ನಾವು ನಗರದೊಳಗೆ ಸಮ್ಮೇಳನ ಆಯೋಜಿಸಿದ್ದರೆ ಸಮಸ್ಯೆಯಾಗುತ್ತಿತ್ತು’ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಒತ್ತು: ಸಚಿವ ಈಗ ಸಮ್ಮೇಳನ ಮುಗಿದಿದೆ. ಇನ್ನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚಿನ ಗಮನ ನೀಡಲಾಗುವುದು. ವಿಶೇಷವಾಗಿ ಜನಪರ ಅಭಿವೃದ್ಧಿ ಕಾರ್ಯಗಳು ಮೈಶುಗರ್ ಪುನಶ್ಚೇತನ ಕೃಷಿ ನೀರಾವರಿ ಆರೋಗ್ಯ ಕುಡಿಯುವ ನೀರಿನ ಕಾರ‍್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ಪೋಡಿ ಮತ್ತು ಇ-ಸ್ವತ್ತು ಕಾರ್ಯಕ್ರಮವನ್ನು ಚುರುಕುಗೊಳಿಸಲಾಗುವುದು. ಕ್ರಿಮಿನಲ್ ಪ್ರಕರಣಗಳ ಹೊರತಾಗಿ ಕೌಟುಂಬಿಕ ಆಸ್ತಿ ವಿವಾದ ಪ್ರಕರಣಗಳಲ್ಲಿ ಜನರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುವಂತೆ ಪೊಲೀಸರಿಗೂ ತಿಳಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.