ADVERTISEMENT

‘ಉಕ್ಕಿನ ಸಚಿವರ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್‌’

ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:16 IST
Last Updated 29 ಅಕ್ಟೋಬರ್ 2025, 3:16 IST

ಮಂಡ್ಯ: ‘ಕೇಂದ್ರದ ಉಕ್ಕು ಸಚಿವರ (ಎಚ್‌.ಡಿ.ಕುಮಾರಸ್ವಾಮಿ) ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಇತಿಹಾಸ ಸೃಷ್ಟಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದವರು ಚೇಸ್ಟೆ ಬಿಟ್ಟು ಸೋಲು-ಗೆಲುವನ್ನು ಸಮನಾಗಿ ತೆಗೆದುಕೊಳ್ಳಬೇಕು. ಇಂದು ಕಾಂಗ್ರೆಸ್ ಬೆಂಬಲಿತ ಮತ್ತೊಬ್ಬ ಪ್ರತಿನಿಧಿ ಆಯ್ಕೆಯಾಗುವ ಸಾಧ್ಯತೆ ಇದೆ. ಉಳಿದ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶಾಸಕರು, ಪಕ್ಷದ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ’ ಎಂದು ಹೇಳಿದರು.

‘ನಮ್ಮ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕೆಲಸ. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಅಧಿಕಾರ ಪಡೆದಿದೆ. ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಕೊಟ್ಟು ಬೆಂಬಲಿಸುತ್ತಿದೆ. ರೈತರ ಸಾಲ ಮನ್ನಾಕ್ಕೆ ನೂರಾರು ಕೋಟಿಯನ್ನು ನೀಡಿದೆ’ ಎಂದರು. 

ADVERTISEMENT

‘ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದ್ದರೂ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ನಾನು ಜೆಡಿಎಸ್‌ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಈಗ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ನಾವು, ನಮ್ಮ ಪಕ್ಷ ಟೀಮ್ ವರ್ಕ್ ಮಾಡ್ತಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.