ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಸರ್ಕಾರಿ ಜಮೀನು ಸಾಬ್ರುಗೆ ಬರೆದುಕೊಟ್ಟರೆ ನೇಣಿಗೆ ಹಾಕುತ್ತೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆಯ ಮಾತು ಚರ್ಚೆಗೆ ಗ್ರಾಸವಾಗಿದೆ.
ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಜೂ.19ರಂದು ನಾಲೆ ಅಭಿವೃದ್ಧಿ ಹಾಗೂ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದರು. ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ದರಖಾಸ್ತು ಜಮೀನು ಉಳುಮೆ ಮಾಡುತ್ತಿರುವ ತಾಲ್ಲೂಕಿನ ಅರ್ಹ ರೈತರಿಗೆ ಸಾಗುವಳಿ ಪತ್ರ ಕೊಡುವವರೆಗೆ ಸರ್ಕಾರಿ ಜಮೀನಿಗೆ ಬೇಲಿ ಹಾಕಲು ಯಾರಿಗೂ ಅವಕಾಶ ನೀಡಬಾರದು’ ಎಂದೂ ಹೇಳಿರುವುದು ಆ ವಿಡಿಯೊದಲ್ಲಿದೆ.
ಈ ಕುರಿತು ಸೋಮವಾರ ಸ್ಪಷ್ಟನೆ ನೀಡಿರುವ ರಮೇಶ ಬಂಡಿಸಿದ್ದೇಗೌಡ, ‘ಮೈಸೂರಿನ ಕೆಲವು ಶ್ರೀಮಂತ ಮುಸಲ್ಮಾನರು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನನ್ನು ಅತಿಕ್ರಮಿಸುತ್ತಿದ್ದಾರೆ ಎಂದು ವ್ಯಾಪಕ ದೂರುಗಳು ಬಂದಿವೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರುಗಳನ್ನೂ ನೀಡಿದ್ದಾರೆ. ಆ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರಿ ಜಮೀನು ಅತಿಕ್ರಮ ತಡೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಪ್ರಮಾದ ಎಂಬಂತೆ ಬಿಂಬಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.