ADVERTISEMENT

ಡಿ.ಸಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 11:57 IST
Last Updated 24 ಸೆಪ್ಟೆಂಬರ್ 2021, 11:57 IST
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ, ಪಿಂಚಣಿ ಹಾಗೂ ಸೇವಾ ನೇಮಕಾತಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ನಂತರ ಕೆಲಕಾಲ ಪ್ರತಿಭಟನೆ ನಡೆಸಿದರು.

ಕೋವಿಡ್‌ ಸೇವೆಗೆ ನೇಮಿಸ್ಪಲ್ಲಟ್ಟಿರುವ ಎಲ್ಲ ಸ್ಕೀಂ ಕಾರ್ಮಿಕರನ್ನು ಕೋವಿಡ್‌ ಯೋಧರು ಎಂದು ಪರಿಗಣಿಸಬೇಕು. ಸರ್ಕಾರ ಹೆಚ್ಚು ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಿ ಸಮರ್ಪಕ ಪ್ರಮಾಣದ ಬೆಡ್‌ಗಳು, ಆಮ್ಲಜನಕ ಇತರೆ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕೋವಿಡ್‌ ಸೇವಾವಧಿಯಲ್ಲಿ ಮೃತಪಟ್ಟ ಎಲ್ಲ ನೌಕರರಿಗೆ ತಲಾ ₹ 50 ಲಕ್ಷ ವಿಮಾ ಸುರಕ್ಷೆ ಒದಗಿಸಬೇಕು. ಕೋವಿಡ್‌ ಸೋಂಕಿತ ಫ್ರಂಟ್‌ಲೈನ್‌ ನೌಕರರು ಹಾಗೂ ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹೆಚ್ಚುವರಿಯಾಗಿ, ಕೋವಿಡ್‌–19 ಸೇವೆಯಲ್ಲಿ ನಿರತರಾಗಿರುವ ಎಲ್ಲ ಗುತ್ತಿಗೆ ನೌಕರರು ಮತ್ತು ಸ್ಕೀಂ ವರ್ಕರ್‌ಗಳಿಗೆ ಮಾಸಿಕ 10 ಸಾವಿರ ರೂಪಾಯಿ ಕೋವಿಡ್‌ ಅವಘಟ ಭತ್ಯೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಅಂಗನವಾಡಿ ವಿಮಾ ಯೋಜನೆಯನ್ನು ಸರಿಯಾಗಿ ಜಾರಿಗೆ ತರಬೇಕು. ಬಿಸಿಯೂಟ ಕಾರ್ಮಿಕರಿಗೆ ಬೇಸಿಗೆ ರಜೆ, ಶಾಲೆ ಮುಚ್ಚಿದ ಅವಧಿಯಲ್ಲಿ ಕನಿಷ್ಠ ವೇತನ ಪಾವತಿಸಬೇಕು. ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದು ಮಾಡಬೇಕು. ಡಿಜಿಲೀಕರಣ ಹೆಸರಿನಲ್ಲಿ ಫಲಾನುಭವಿಗಳಿಗೆ ತೊಂದರೆ ಕೊಡಬಾರದು. ಸಾರ್ವತ್ರಿಕ ಆರೋಗ್ಯದ ಹಕ್ಕನ್ನು ಜಾರಿಗೆ ತರಬೇಕು ಎಂದು ಆಗ್ರಹ ಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಬಿ.ಪುಷ್ಪಾವತಿ, ಮುಖಂಡರಾದ ಪಲ್ಲವಿ, ಜ್ಯೋತಿ, ಜಾಸ್ಸಿ, ಪದ್ಮಾ, ನಾಗರತ್ನ, ಶೋಭ, ರಾಜಮ್ಮ, ಮುದ್ದುಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.