
ಕೆ.ಸಿ.ನಾರಾಯಣಗೌಡ
ಮಂಡ್ಯ: ‘ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಸೇರ್ಪಡೆ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾರಾಯಣಗೌಡರು ನಮ್ಮ ಸ್ನೇಹಿತರಾಗಿದ್ದು, ಹಲವು ದಿನಗಳಿಂದಲೂ ಸಂಪರ್ಕದಲ್ಲಿದ್ದರು. ಕೆ.ಆರ್.ಪೇಟೆ ಭಾಗದ ಹಲವು ಮುಖಂಡರು, ಕಾರ್ಯಕರ್ತರೂ ಕಾಂಗ್ರೆಸ್ ಸೇರಲಿದ್ದಾರೆ’ ಎಂದರು.
‘ಬಿಜೆಪಿ ಟಿಕೆಟ್ ಸಿಗದ ಸಂಸದೆ ಸುಮಲತಾ ಅವರ ನಡೆ ಬಗ್ಗೆ ಗೊತ್ತಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಒತ್ತಾಯಿಸಿಲ್ಲ. ಅವರ ಹಾಗೂ ನಮ್ಮ ನಡುವೆ ವೈಯಕ್ತಿಕವಾಗಿ ಉತ್ತಮ ಸ್ನೇಹ ಸಂಬಂಧವಿದೆ. ರಾಜಕೀಯವಾಗಿ ಯಾವುದೇ ಚರ್ಚೆ ಮಾಡಿಲ್ಲ. ಅವರು ಕಾಂಗ್ರೆಸ್ ಬೆಂಬಲಿಸಿದರೆ ಸ್ವಾಗತಿಸುತ್ತೇವೆ’ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಎಲ್ಲಿಗೇ ಹೋದರೂ ಅದೇ ತನ್ನ ಕರ್ಮಭೂಮಿ ಎನ್ನುತ್ತಾರೆ. ಎಚ್.ಡಿ.ದೇವೇಗೌಡರ ಮಗನೆಂಬ ಕಾರಣಕ್ಕೆ ಅವರ ಮೇಲೆ ಗೌರವವಿದೆ. 3 ಬಾರಿ ಮುಖ್ಯಮಂತ್ರಿ ಮಾಡಿದ ರಾಮನಗರವನ್ನು ಪ್ರಾಣ ಹೋದರೂ ಬಿಡುವುದಿಲ್ಲ ಎನ್ನುತ್ತಿದ್ದರು. ಈಗ ಮಂಡ್ಯಕ್ಕೆ ಬರುತ್ತಿರುವುದರಿಂದ ಅಲ್ಲಿನ ಜನ ವಿರೋಧಿಸುತ್ತಿದ್ದಾರೆ. ಯಾರೇ ಅಭ್ಯರ್ಥಿಯಾದರೂ ನಮಗೆ ತೊಂದರೆ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.