ADVERTISEMENT

ನಾಗಮಂಗಲ: ಖಾಸಗಿ ಆಸ್ಪತ್ರೆಗಳಿಗೆ ಪಿಎಚ್‌ಸಿ ಸಡ್ಡು; ಮೆಚ್ಚುಗೆ

ಉಲ್ಲಾಸ್.ಯು.ವಿ
Published 16 ಮೇ 2024, 7:27 IST
Last Updated 16 ಮೇ 2024, 7:27 IST
ನಾಗಮಂಗಲ ತಾಲ್ಲೂಕಿನ ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ಮಿಸಿರುವ ಆಧುನಿಕ‌ ಸೌಲಭ್ಯಗಳುಳ್ಳ ವಾರ್ಡ್
ನಾಗಮಂಗಲ ತಾಲ್ಲೂಕಿನ ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆಗಾಗಿ ನಿರ್ಮಿಸಿರುವ ಆಧುನಿಕ‌ ಸೌಲಭ್ಯಗಳುಳ್ಳ ವಾರ್ಡ್   

ನಾಗಮಂಗಲ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ತಾಲ್ಲೂಕಿನ ಹೊನ್ನಾವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಅತ್ಯಾಧುನಿಕ ಸೌಲಭ್ಯಗಳು ಜನರ ಉಬ್ಬೇರಿಸುವಂತೆ ಮಾಡಿವೆ. ಖಾಸಗಿ ಆಸ್ಪತ್ರೆಗೆ ಸಡ್ಡು ಒಡೆಯುತ್ತಿರುವ ಈ ಪಿಎಚ್‌ಸಿ ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಸಜ್ಜಿತ ಪ್ರಯೋಗಾಲಯ, ಉತ್ತಮ ಔಷಧಾಲಯ, ಸಕಲ ಪರಿಕರಗಳುಳ್ಳ ಚಿಕಿತ್ಸಾ ಕೊಠಡಿ, ಸೌಲಭ್ಯವುಳ್ಳ ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಆರೋಗ್ಯ ಸಿಬ್ಬಂದಿ ಕೊಠಡಿ, ಲಸಿಕಾ ಕೊಠಡಿ,  ಸಭಾಂಗಣ, ಹೆರಿಗೆ ಕೊಠಡಿ, ಶಸ್ತ್ರಚಿಕಿತ್ಸೆ ಕೊಠಡಿ, ಡ್ರೆಸ್ಸಿಂಗ್ ರೂಂ, ರೋಗಿಗಳ ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೈಟೆಕ್‌ ಸ್ಪರ್ಶ ನೀಡಿವೆ.

ಹೊನ್ನಾವರ, ಎಚ್.ಭೂವನಹಳ್ಳಿ, ಮಲ್ಲೇನಹಳ್ಳಿ, ಮಾದಿಹಳ್ಳಿ, ಸಾತೇನಹಳ್ಳಿ, ಕ್ಯಾತನಹಳ್ಳಿ, ವಡ್ಡರಹಳ್ಳಿ, ತುರುಬನಹಳ್ಳಿ, ಬೀಚನಹಳ್ಳಿ, ಮಾಚನಾಯಕನಹಳ್ಳಿ, ಹೆಚ್.ಕೋಡಿಹಳ್ಳಿ, ಮಂಗರಬಳ್ಳಿ, ಸೇರಿದಂತೆ 21 ಗ್ರಾಮಗಳ ಜನರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ.

ADVERTISEMENT

ಜೊತೆಗೆ ತಾಲ್ಲೂಕಿನ ಗಡಿ ಪ್ರದೇಶ, ಹಾಸನ ಜಿಲ್ಲೆಯ ಬೆಟ್ಟದಹಳ್ಳಿ, ಜುಟ್ಟನಹಳ್ಳಿ, ಆಯಿರಳ್ಳಿ, ಶ್ರವಣಬೆಳಗೊಳ, ಕುಮ್ಮೇನಹಳ್ಳಿ ಜನರೂ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಾರೆ.  ಉತ್ತಮ ಚಿಕಿತ್ಸಾ ಸೌಲಭ್ಯಗಳ ಮಾಹಿತಿ ಜನರ ಬಾಯಿಯಿಂದ ಬಾಯಿಗೆ ಹರಡಿದ್ದು ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಗರ್ಭಿಣಿಯರ ಆರೈಕೆ, ಮಕ್ಕಳಿಗೆ ಲಸಿಕೆ ಬಗ್ಗೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. 

ಇಲ್ಲಿಯ ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್‌ ಅವರ ಪರಿಶ್ರಮದಿಂದ ಆಸ್ಪತ್ರೆಗೆ ಆಧುನಿಕ ಸೌಲಭ್ಯಗಳು ದೊರೆತಿವೆ.  ಅಲ್ಲದೇ ಆಸ್ಪತ್ರೆಯಿಂದ ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.  ಜೊತೆಗೆ ಆಸ್ಪತ್ರೆ ಸಿಬ್ಬಂದಿ ಅಂಗನವಾಡಿ ಕೇಂದ್ರ, ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಾರೆ.

ಹೃದಯ ವೈಶಾಲ್ಯ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಉಚಿತ ಇಸಿಜಿ ಮತ್ತು ಹೃದ್ರೋಗ ತಪಾಸಣೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಮುಗುಳ್ನಗೆ ಸಿಂಚನ ಕಾರ್ಯಕ್ರಮದಡಿಯಲ್ಲಿ ಹಲ್ಲಿನ ತಪಾಸಣೆಯನ್ನು ತಪ್ಪದೇ ಮಾಡಲಾಗುತ್ತಿದೆ.  ತೀವ್ರ ಆರೋಗ್ಯ ಸಮಸ್ಯೆ ಇದ್ದಾಗ ವೈದ್ಯರು ಮನೆಗೇ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

‘ನಾವು ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಚಿಕಿತ್ಸೆಯನ್ನು ಪಿಎಚ್‌ಸಿಯಲ್ಲೂ ದೊರೆಯಬೇಕು, ಉತ್ತಮ ವಾತಾವರಣ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ನಂಬಿಕೆ ಬರಬೇಕು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಟಿಪ್ಪು ಸುಲ್ತಾನ್ ಹೇಳಿದರು.

‘ಎಬಿಎಆರ್‌ಕೆ ಸೇರಿದಂತೆ ವಿವಿಧ ಯೋಜನೆಗಳ ಅನುದಾನಗಳನ್ನು ಉತ್ತಮವಾಗಿ ಬಳಸಿಕೊಂಡು ಆಸ್ಪತ್ರೆಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಡಾ.ಟಿಪ್ಪು ಸುಲ್ತಾನ್‌ ಅವರ ಕಾರ್ಯವನ್ನು ಅಭಿನಂದಿಸುತ್ತೇನೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಹೇಳಿದರು.

ಹೊನ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ರೂಪಿಸಿರುವ ಕೊಠಡಿ
ಸುಸಜ್ಜಿತ ಚಿಕಿತ್ಸಾ ಕೊಠಡಿ
ಡಾ.ಟಿಪ್ಪು ಸುಲ್ತಾನ್‌
ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡುವ ವೈದ್ಯರು ಹೃದಯ ವೈಶಾಲ್ಯ, ಮುಗುಳ್ನಗೆ ಕಾರ್ಯಕ್ರಮ ಜಾರಿ ವಿವಿಧ ಯೋಜನೆಗಳ ಅನುದಾನ ಸದ್ಬಳಕೆ
ಕಾಡುತ್ತಿದೆ ಸಿಬ್ಬಂದಿ ಕೊರತೆ
ಹೊನ್ನಾವರ ಪಿಎಚ್‌ಸಿಯಲ್ಲಿ ಆಡಳಿತ ವೈದ್ಯಾಧಿಕಾರಿ ಶುಶ್ರುಷಣಾಧಿಕಾರಿ ಹುದ್ದೆಗಳಿವೆ. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ  ಆರೋಗ್ಯ ನಿರೀಕ್ಷಣಾಧಿಕಾರಿ ಡಿ ದರ್ಜೆ ನೌಕರ ಹೊರಗಿನಿಂದ ಬಂದು ಹೋಗುತ್ತಾರೆ. ಸಿಬ್ಬಂದಿ ಕೊರತೆಯಿಂದ ಒತ್ತಡ ಹೆಚ್ಚಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ. ‘ಆಸ್ಪತ್ರೆಗೆ ಬಂದರೆ ಅಲ್ಲಿನ ಸ್ವಚ್ಛ ವಾತಾವರಣವು ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಡಾ.ಟಿಪ್ಪು ಸುಲ್ತಾನ್ ಅಭಿನಂದನಾರ್ಹರು’ ಎಂದು ಹೊನ್ನಾವರ ಗ್ರಾಮಸ್ಥ ಎಚ್.ಟಿ.ದರ್ಶನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.