ADVERTISEMENT

ಸಿನಿಮಾಗಿಂತ ಮಂಡ್ಯದಲ್ಲಿ ಭ್ರಷ್ಟಾಚಾರ ಹೆಚ್ಚು: ಸಂಸದೆ ಸುಮಲತಾ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:16 IST
Last Updated 14 ಜುಲೈ 2021, 3:16 IST
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಮನ್‌ಮುಲ್ ಎದುರು ರೈತ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಮಾತನಾಡಿದರು
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಮನ್‌ಮುಲ್ ಎದುರು ರೈತ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಮಾತನಾಡಿದರು   

ಮದ್ದೂರು: ‘ನಾನು ಸಿನಿಮಾ ರಂಗದವಳು ನಿಜ. ಆದರೆ, ಸಿನಿಮಾಗಳಲ್ಲಿ ಕಾಣದಿರುವಷ್ಟು ಭ್ರಷ್ಟಾಚಾರ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದನ್ನು ಕಂಡು ದಿಗ್ಭ್ರಾಂತಳಾಗಿದ್ದೇನೆ’ ಎಂದು ಸಂಸದೆ ಸುಮಲತಾ ತಿಳಿಸಿದರು.

ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್‌ ಎದುರು ರೈತ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.

‘ನನಗೆ ರಾಜಕಾರಣವು ಹೊಸದೇ ಆಗಿದ್ದರೂ, ಮುಂದೆ ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ. ಚುನಾವಣೆ ವೇಳೆ ರೈತ ಸಂಘದವರು ನನಗೆ ಕೊಟ್ಟಿದ್ದ ಬೆಂಬಲವನ್ನು ಮರೆಯುವುದಿಲ್ಲ. ಆ ಕಾರಣಕ್ಕಾಗಿಯೇ ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿಗೆ ನೀರು ಬೆರೆಸಿದ ಹಗರಣಕ್ಕೆ ಸಂಬಂಧಿಸಿದಂತೆ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದೇನೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಹೈನುಗಾರಿಕೆಯನ್ನೇ ನಂಬಿಕೊಂಡಿದ್ದು, ಅವರಿಗೆ ಅನ್ಯಾಯವಾಗಬಾರದು. ಇತ್ತೀಚೆಗೆ ನಾನು ಏನೇ ಮಾತನಾಡಿದರೂ ರಾಜಕೀಯವನ್ನು ಬೆರೆಸಲಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದೇನೆ. ಅಣೆಕಟ್ಟೆಯ ಸುರಕ್ಷತೆ ನನಗೆ ಹಾಗೂ ಜಿಲ್ಲೆಯ ರೈತರಿಗೆ ಮುಖ್ಯ. ಅದಕ್ಕಾಗಿ ಹೋರಾಟ ಮಾಡಿದಾಗಲೆಲ್ಲ, ಕೆಲವರು ದುಡ್ಡು ವಸೂಲಿ ಮಾಡುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೈಷುಗರ್ ಸಕ್ಕರೆ ಕಾರ್ಖಾನೆಯು ಖಾಸಗೀಕರಣ ಆಗಬೇಕು ಎಂದು ನಾನು ಎಲ್ಲೂ ಹೇಳಿಲ್ಲ. ಹಲವು ಸರ್ಕಾರಗಳು ನೂರಾರು ಕೋಟಿ ರೂಪಾಯಿ ಸುರಿದರೂ ಕಾರ್ಖಾನೆ ಅಭಿವೃದ್ಧಿಯಾಗಿಲ್ಲ ಎಂದು ಅಧಿಕಾರಿಗಳು ಕೊಟ್ಟಿದ್ದ ಮಾಹಿತಿಯನ್ನೇ ಮಾಧ್ಯಮಗಳ ಮುಂದೆ ಹೇಳಿದ್ದೆ. ಯಾವ ರೀತಿಯಲ್ಲಾದರೂ ಕಾರ್ಖಾನೆ ಆರಂಭಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆ’ ಎಂದು ಸ್ಪಷ್ಟಪಡಿಸಿದರು.

‘ಅಂಬರೀಷ್ ನಮ್ಮನ್ನು ಅಗಲಿ 2 ವರ್ಷ ಆಗಿದ್ದರೂ ಜಿಲ್ಲೆಯ ಜನರು ಅವರ ಮೇಲೆ ಅದೇ ಪ್ರೀತಿ, ಗೌರವ ಇಟ್ಟಿದ್ದಾರೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಸೀತಾರಾಮು, ರಾಮಕೃಷ್ಣಯ್ಯ, ವಿವೇಕಾನಂದ, ಮಧು ಚಂದನ್, ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.