ADVERTISEMENT

ಬಿಜೆಪಿಯಿಂದ ದೇಶದ ಸಂಪತ್ತು ಲೂಟಿ: ರಾಜ್ಯಸಭಾ ಸದಸ್ಯ ಶಿವದಾಸನ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:11 IST
Last Updated 31 ಡಿಸೆಂಬರ್ 2025, 6:11 IST
ಮಂಡ್ಯ ನಗರದ ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಶಿವದಾಸನ್‌ ಮಾತನಾಡಿದರು
ಮಂಡ್ಯ ನಗರದ ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಶಿವದಾಸನ್‌ ಮಾತನಾಡಿದರು   

ಮಂಡ್ಯ: ‘ದೇಶದಲ್ಲಿ ನರೇಗಾ ಹೆಸರಿಗೂ ರಾಮನ ಹೆಸರು ಬಳಸಿ ಬಡವರನ್ನು ಕೊಲ್ಲಲು ಹಾಗೂ ದೇಶದ ಸಂಪತ್ತು ಕೊಳ್ಳೆ ಹೊಡೆಯಲು ಆರ್‌ಎಸ್‌ಎಸ್‌, ಬಿಜೆಪಿ ನಿಂತಿದೆ’ ಎಂದು ರಾಜ್ಯಸಭಾ ಸದಸ್ಯ ಶಿವದಾಸನ್‌ ಕಿಡಿಕಾರಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಎಸ್‌ ಸಭಾಂಗಣದಲ್ಲಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (ಜಿಲ್ಲಾ ಸಮಿತಿ) ವತಿಯಿಂದ ಮಂಗಳವಾರ ನಡೆದ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಗರಿಗೆ ಇಬ್ಬರು ರಾಮರಿದ್ದಾರೆ. ಒಂದು ಅವರ ನಾಥೂರಾಮ, ಇನ್ನೊಂದು ಹಳ್ಳಿಗಳಲ್ಲಿರುವ ಬಡ ಜನತೆಯ ರಾಮ. ನಾಥೂರಾಮನನ್ನು ಬಳಸಿಕೊಂಡು ಮಹಾತ್ಮ ಗಾಂಧೀಜಿ ಅವರನ್ನು ಕೊಲ್ಲಲಾಯಿತು. ದೇವರ ಹೆಸರಿನ ರಾಮನಲ್ಲಿ ಈಗ ಹಳ್ಳಿಗಳಲ್ಲಿರುವ ಬಡ ಜನರನ್ನು ಕೊಲ್ಲಲು ಬಿಜೆಪಿ ಹೊರಟಿದೆ. ಒಟ್ಟಾರೆ ರಾಮನ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡಲು ಹೊರಟಂತಿದೆ ಎಂದು ಆರೋಪಿಸಿದರು.

ADVERTISEMENT

ಅಯೋಧ್ಯೆ ಮಂದಿರ ಕಟ್ಟುತ್ತೇವೆಂದು ಕೋಟ್ಯಂತರ ರೂಪಾಯಿ ವಂಚಿಸಿತು. ಮಧುರೈನಲ್ಲಿ ಕಟ್ಟಿದ ಸೇತುವೆ ಮುರಿದು ಬಿದ್ದು ನಷ್ಟವಾಯಿತು. ಬಿಜೆಪಿ ಅವರ ಆಸಕ್ತಿ ಏನಿದ್ದರೂ ಶ್ರೀಮಂತರು, ಕಾರ್ಪೋರೇಟ್‌ ಪರವಾಗಿದೆ. ಬಡವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಮೊದಲು ಉದ್ಯೋಗ ಖಾತ್ರಿ ಯೋಜನೆ ಹಕ್ಕು ಕಸಿದುಕೊಳ್ಳಲಾಯಿತು. ಈಗ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್‌’(ವಿಬಿ ಜಿ ರಾಮ್‌ ಜಿ) ಜಾರಿಗೆ ತರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಯಾವುದೇ ಯೋಜನೆಗಳಿಗೆ ಒಪ್ಪಿಕೊಂಡ ಅನುದಾನವನ್ನು ಕೊಡುತ್ತಿಲ್ಲ. ಉದಾಹರಣೆಗೆ ಅಂಗನವಾಡಿ ನೌಕರರಿಗೆ ಸಮರ್ಪಕವಾಗಿ ಗೌರವಧನ ನೀಡುತ್ತಿಲ್ಲ. ಬಿಸಿಯೂಟ ನೌಕರರಿಗೂ ಆಯಾ ರಾಜ್ಯ ಸರ್ಕಾರವೇ ವೇತನ ಕೊಡುವಂತೆ ಮಾಡಿದೆ. ಕೇಂದ್ರ ಸರ್ಕಾರವು ಕೇವಲ ಕಡಿಮೆ ಅನುದಾನ ನೀಡಿದರೆ ನೌಕರರು ಯಾವ ರೀತಿ ಜೀವನ ನಡೆಸುವುದು ನೀವೇ ಹೇಳಿ ಎಂದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಕೇಂದ್ರ ಸಮಿತಿ ಸದಸ್ಯೆ ಸರೋಜಮ್ಮ, ಕಾರ್ಯದರ್ಶಿ ಕೆ.ಹನುಮೇಗೌಡ, ಮುಖಂಡರಾದ ಬಿ.ಎಚ್‌.ಆನಂದ್‌, ಎಂ.ಪಿ.ಅರುಣ್‌ಕುಮಾರ್‌, ಅಮಾಸಯ್ಯ, ಎಸ್‌.ನಾರಾಯಣ್‌, ಬಿ.ಹನುಮೇಶ್‌, ಎಲ್‌.ಸರೇಂದ್ರ, ಬಿ.ಎಚ್‌.ಗಿರೀಶ್‌, ವಸಂತ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.