ADVERTISEMENT

ವಿವೇಕಾನಂದ ಬಡಾವಣೆ ನಿವೇಶನ ಹಂಚಿಕೆ ತನಿಖೆ ಚುರುಕು: ಕೆರೆಯಂಗಳದ ನಿವಾಸಿಗಳಿಗೆ ಭಯ

ಎಂ.ಎನ್.ಯೋಗೇಶ್‌
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
ಮಂಡ್ಯದ ಕೆರೆಯಂಗಳ ವಿವೇಕಾನಂದ ಬಡಾವಣೆಯ ನೋಟ
ಮಂಡ್ಯದ ಕೆರೆಯಂಗಳ ವಿವೇಕಾನಂದ ಬಡಾವಣೆಯ ನೋಟ   

ಮಂಡ್ಯ: ಕೆರೆಯಂಗಳದ ವಿವೇಕಾನಂದ ಬಡಾವಣೆ ನಿವೇಶನ ಹಂಚಿಕೆ ಹಗರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿರುವ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಪ್ರಕರಣ ಸಂಬಂಧ 24 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್‌ ಹೊರಡಿಸಿತ್ತು. ಜುಲೈ 20ರಂದು ಕೆಲವು ಆರೋಪಿಗಳು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಆ.10ಕ್ಕೆ ಮುಂದೂಡಲಾಗಿದ್ದು ಆರೋಪಿಗಳಲ್ಲಿ ನಡುಕ ಸೃಷ್ಟಿಯಾಗಿದೆ.

ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ಮಾಜಿ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ ಸೇರಿ 24 ಮಂದಿ ಆರೋಪಿಗಳಾಗಿದ್ದಾರೆ. 2009ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಗೊಳಿಸಲಾದ ವಿವೇಕಾನಂದ ಬಡಾವಣೆಯ ಲೇಔಟ್‌ನಲ್ಲಿ 107ನಿವೇಶನಗಳ ಅಕ್ರಮ ಹಂಚಿಕೆ ಕುರಿತು ವಿಚಾರಣೆ ನಡೆಯುತ್ತಿದೆ.

ADVERTISEMENT

ಕೆರೆಯಂಗಳದ ಒಟ್ಟು 435 ಎಕರೆ ಭೂಮಿಯಲ್ಲಿ 2,658 ನಿವೇಶನ ಅಭಿವೃದ್ಧಿಗೊಳಿಸಲಾಗಿದೆ. ಕರ್ನಾಟಕ ಗೃಹನಿರ್ಮಾಣ ಮಂಡಳಿ (ಕೆಎಚ್‌ಬಿ) 200 ಎಕರೆ, ಮುಡಾ 230 ಎಕರೆ ಪ್ರದೇಶದಲ್ಲಿ ನಿವೇಶನ ಅಭಿವೃದ್ಧಿಗೊಳಿಸಿದೆ. ನಿವೇಶನ ಹಂಚಿಕೆ ಸಂಬಂಧ 2009ರಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು.

ಅರ್ಜಿ ಸಲ್ಲಿಕೆಗೆ ನ.30, 2009 ಕಡೆಯ ದಿನಾಂಕವಾಗಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಅನ್ವಯ ನ.30, 2009 ಕ್ಕೆ ಮುಂಚೆಯೇ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ, ತಮ್ಮ ಕುಟುಂಬ ಸದಸ್ಯರಿಗೆ, ಸಂಬಂಧಿಕರಿಗೆ ಹಂಚಿಕೆ ಮಾಡಿಕೊಂಡಿದ್ದರು ಎಂಬ ಆರೋಪ ದೂರಿನಲ್ಲಿದೆ.

ಈ ಅಂಶವನ್ನೇ ಮುಖ್ಯಾವಾಗಿರಿಸಿಕೊಂಡು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ 2010ರಲ್ಲಿ ದೂರು ಸಲ್ಲಿಸಿದ್ದರು. ಸಾರ್ವಜನಿಕರಿಗೆ ವಂಚನೆ, ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ ಎಂಬ ಅಂಶ ಬೆಳಕಿಗೆ ಬಂದ ಕಾರಣ 2014ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೆಲವು ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಅಧಿಕಾರಿಗಳ ಪರ ತೀರ್ಪು ನೀಡಿತ್ತು. ಹೈಕೋರ್ಟ್‌ ತೀರ್ಪಿನ ವಿರುದ್ಧ ಸಿಬಿಐ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸರ್ವೋಚ್ಛ ನ್ಯಾಯಾಲಯ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಿತ್ತು. ಇಷ್ಟೆಲ್ಲಾ ಪ್ರಕ್ರಿಯೆಗೆ ನಾಲ್ಕೈದು ವರ್ಷ ಕಳೆದು ಹೋಗಿದ್ದು ಈಗ ವಿಚಾರಣೆ ಚುರುಕುಗೊಂಡಿದೆ.

ಭಯ ಏಕೆ: ಕೆರೆಯಂಗಳದಲ್ಲಿ 107 ನಿವೇಶನ ಮಾಲೀಕರಿಗೆ ಮಾತ್ರವಲ್ಲದೆ ಬೇರೆ ನಿವೇಶನಗಳ ಖರೀದಿದಾರರಿಗೂ ಭಯವಿದೆ. ಅದಕ್ಕೆ ಕೆ.ಮಥಾಯಿ ವರದಿ ಕಾರಣ. ಎಲ್ಲಾ ನಿವೇಶನ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದ್ದು ಸರ್ಕಾರದ ಬೊಕ್ಕಸಕ್ಕೆ ₹ 300 ಕೋಟಿ ನಷ್ಟವಾಗಿದೆ ಎಂದು ಮುಡಾ ಆಯುಕ್ತರಾಗಿದ್ದ ಮಥಾಯಿ ಅವರು ವರದಿ ನೀಡಿದ್ದು ಅದನ್ನೂ ಸಿಬಿಐ ತನಿಖೆಗೆ ವರ್ಗಾಯಿಸಲಾಗಿದೆ. ಹೀಗಾಗಿ ಇಡೀ ಬಡವಣೆಯಲ್ಲಿ ಭಯ ಆವರಿಸಿದೆ.

ಈ ಕಾರಣದಿಂದಾಗಿಯೇ ಇಲ್ಲಿಯವರೆಗೆ ವಿವೇಕಾನಂದ ಬಡಾವಣೆಯಲ್ಲಿ ನಿವೇಶನ ಮಾರಾಟ, ಖಾತೆ, ಮನೆ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ತಡೆಹಿಡಿಯಲಾಗಿತ್ತು. ಇತ್ತೀಚೆಗಷ್ಟೇ ಅನುಮತಿ ನೀಡಲಾಗುತ್ತಿದೆ. ಉಪನ್ಯಾಸಕರು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಅಲ್ಲಿ ನಿವೇಶನ ಖರೀದಿ ಮಾಡಿದ್ದು ಅವರಿಗೆ ಸಿಬಿಐ ‘ಗುಮ್ಮ’ ಕಾಡುತ್ತಿದೆ.

‘ಬಡಾವಣೆಯನ್ನು ಮುಡಾ ಕೂಡ ಅಭಿವೃದ್ಧಿಗೊಳಿಸದ ಕಾರಣ ನಿವೇಶನ ಖರೀದಿದಾರರ ಭಯ ಮತ್ತಷ್ಟು ಹೆಚ್ಚಾಗಿದೆ. ಆದಷ್ಟು ಬೇಗ ಪ್ರಕರಣ ಮುಗಿದು ಬಡಾವಣೆಯನ್ನು ಮುಡಾ ಅಭಿವೃದ್ಧಿಗೊಳಿಸಬೇಕು’ ಎಂದು ನಿವೇಶನ ಖರೀದಿ ಮಾಡಿರುವ ನಿವೃತ್ತ ಉಪನ್ಯಾಸಕರೊಬ್ಬರು ಹೇಳಿದರು.

***********

ಹಾಜರಾತಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದ ಕಾರಣ ಕೋರ್ಟ್‌ಗೆ ಹಾಜರಾಗಿಲ್ಲ. ಮುಂದೆ ಹಾಜರಾಗಿ ವಿಚಾರಣೆ ಎದುರಿಸಲಾಗುವುದು

–ಎಂ.ಶ್ರೀನಿವಾಸ್‌, ಶಾಸಕ

*********

ಆದಷ್ಟು ಬೇಗ ಸಿಬಿಐ ವಿಚಾರಣೆ ಮುಗಿದು ಗೊಂದಲ ನಿವಾರಣೆಯಾಗಲಿದೆ. ನಂತರ ಕೆರೆಯಂಗಳ ಅಭಿವೃದ್ಧಿಗೊಳಿಸಿ ಬಾಕಿ ನಿವೇಶನ ಹಂಚಿಕೆ ಮಾಡಲಾಗುವುದು

–ಕೆ.ಶ್ರೀನಿವಾಸ್‌, ಮುಡಾ, ಅಧ್ಯಕ್ಷ

*********

ಇದೊಂದು ಬಹುಕೋಟಿ ಹಗರಣವಾಗಿದ್ದು ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಶೀಘ್ರ ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ

– ಕೆ.ಆರ್‌.ರವೀಂದ್ರ, ದೂರುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.