ADVERTISEMENT

ಮೈಷುಗರ್‌ ಕಬ್ಬು ಬೆಳೆಗಾರರ ಒಕ್ಕೂಟ ರಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 11:02 IST
Last Updated 26 ಆಗಸ್ಟ್ 2020, 11:02 IST
   

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ಉಳಿವಿಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಲು ನೂತನವಾಗಿ ಮೈಷುಗರ್‌ ಕಬ್ಬು ಬೆಳೆಗಾರರ ಒಕ್ಕೂಟ ರಚನೆಯಾಗಿದ್ದು, ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯೋನ್ಮುಖವಾಗಲಿದೆ’ ಎಂದು ನೂತನ ಅಧ್ಯಕ್ಷ ಎಸ್‌.ಎಂ.ವೇಣುಗೋಪಾಲ್‌ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಕಾರ್ಖಾನೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿ, ಬೆಳೆಗಾರರನ್ನು ಸಂಘಟಿಸಿ ಹೋರಾಟ ಮಾಡಲಾಗುವುದು. ಜನ ಜಾಗೃತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಒಕ್ಕೂಟದ ಸದಸ್ಯರು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸಿಎಂ ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯವರೇ ಆದರೂ ಸೂಕ್ತ ನಿರ್ಧಾರ ತೆಗೆದುಕೊಳ್ಳದ ಪರಿಣಾಮ ಸಾಮಾನ್ಯ ರೈತರ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್‌ ಎಂ) ಅಡಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪ್ರಾರಂಭಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು‘ ಎಂದು ಒತ್ತಾಯಿಸಿದರು.

ADVERTISEMENT

‘ಮುಖ್ಯಮಂತ್ರಿ, ಶಾಸಕ, ಸಂಸದರು, ಜಿಲ್ಲಾಧಿಕಾರಿ ಅವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇದೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿದ್ದು, ವರದಿ ಬರಬೇಕು ಎಂದು ವಿಳಂಬ ಮಾಡುತ್ತಿದ್ದಾರೆ. ನಿಜವಾದ ಕಬ್ಬು ಬೆಳೆಗಾರರ ಕಷ್ಟ ಆಲಿಸುವ, ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ. ಈ ವಾರ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪದಾಧಿಕಾರಿಗಳು: ಎಸ್‌.ಕೃಷ್ಣ–ಗೌರವ ಅಧ್ಯಕ್ಷ, ಎಸ್‌.ಎಂ.ವೇಣುಗೋಪಾಲ್‌–ಅಧ್ಯಕ್ಷ, ಶಿವಶಂಕರ್‌ ಉಪಾಧ್ಯಕ್ಷರು, ಎಚ್‌.ಎಸ್‌. ನಾಗರಾಜು, ಜಿ.ಎಚ್‌.ನಾಗೇಶ್‌ ಕಾರ್ಯಾಧ್ಯಕ್ಷರು, ಎಂ.ನಾಗರಾಜು–ಪ್ರಧಾನ ಕಾರ್ಯದರ್ಶಿ, ಎಚ್‌.ಎಸ್‌.ಶಿವರಾಜು, ಲಕ್ಷ್ಮಣ–ಸಂಘಟನಾ ಕಾರ್ಯದರ್ಶಿಗಳು, ಎಚ್‌.ಕೃಷ್ಣ, ಎಚ್‌.ಸಿ.ಅನಂತ–ಸಹ ಕಾರ್ಯದರ್ಶಿಗಳು, ಎಂ.ಇ.ಚಂದ್ರಶೇಖರ್‌–ಖಜಾಂಚಿ, ಸಿ.ಬೊಮ್ಮೇಗೌಡ, ಎಂ.ಸಿ.ರಮೇಶ–ಸಂಚಾಲಕರು ಸೇರಿದಂತೆ 12 ನಿರ್ದೇಶಕರು ಒಕ್ಕೂಟದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.