ADVERTISEMENT

ಗರ್ಭದಿಂದ ಜಾರಿ ಮಗು ಸಾವು: ವೈದ್ಯರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಮೇ 2021, 12:39 IST
Last Updated 26 ಮೇ 2021, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಕೋವಿಡ್‌ ಪರೀಕ್ಷೆ ನೆಪದಿಂದ ಗರ್ಭಿಣಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಕಾರಣ ನಗರದ ಮಿಮ್ಸ್‌ ಆಸ್ಪತ್ರೆ ಹೆರಿಗೆ ವಾರ್ಡ್‌ ಬಾಗಿಲಲ್ಲೇ ಬುಧವಾರ ತಾಯಿಯ ಗರ್ಭದಿಂದ ಮಗು ಜಾರಿ ಬಿದ್ದು ಮೃತಪಟ್ಟಿದೆ.

ಇಸ್ಮಾಯಿಲ್‌ ಹಾಗೂ ಸೋನು ದಂಪತಿ ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದರು. ಹೆರಿಗೆ ನೋವು ಕಾಣಿಸಿಕೊಂಡರೂ ಕೋವಿಡ್‌ ಪರೀಕ್ಷೆಯಾಗಿಲ್ಲ ಎನ್ನುವ ಕಾರಣಕ್ಕೆ ಗರ್ಭಿಣಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ. ರ‍್ಯಾಪಿಡ್‌ ಪರೀಕ್ಷೆ ನಡೆಸಲೂ ಸಿಬ್ಬಂದಿ ತಡಮಾಡಿದ ಕಾರಣ ಹೆರಿಗೆ ವಾರ್ಡ್‌ ಬಾಗಿಲಲ್ಲೇ ಗರ್ಭದಿಂದ ಜಾರಿ ಮಗು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆಯ ನಂತರ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು.

‘ರ‍್ಯಾಪಿಡ್‌ ಪರೀಕ್ಷೆಯಾಗಿ ವರದಿ ನೆಗೆಟಿವ್‌ ಬಂದರೂ ದಾಖಲು ಮಾಡಿಕೊಳ್ಳಲು ಸಿಬ್ಬಂದಿ 2 ಗಂಟೆ ತಡ ಮಾಡಿದರು. ಕಿವಿ ಓಲೆ ತೆಗೆಯುವವರೆಗೂ ಒಳಗೆ ಬಿಡುವುದಿಲ್ಲ ಎಂದು ತಾಕೀತು ಮಾಡಿದರು. ಗರ್ಭಿಣಿ ಕಿವಿ ಓಲೆ ಬಿಚ್ಚುವಾಗ ನಮ್ಮ ಕಣ್ಣಮುಂದೆಯೇ ಮಗು ಕೆಳಗೆ ಬಿದ್ದು ಸಾವನ್ನಪ್ಪಿತು. ಮಿಮ್ಸ್‌ ವೈದ್ಯರಿಗೆ ಮಾನವೀಯತೆ ಇಲ್ಲ’ ಎಂದು ಗರ್ಭಿಣಿಯ ಸಂಬಂಧಿ ಶಫಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಹಿಳೆಯ ಪೋಷಕರು, ಸಂಬಂಧಿಕರು ಮಿಮ್ಸ್‌ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಕೆಲಕಾಲ ಆಸ್ಪತ್ರೆ ಮುಂದೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

‘ಸೂಕ್ತ ಸಮಯದಲ್ಲಿ ಗರ್ಭಿಣಿಯನ್ನು ಪರೀಕ್ಷೆ ಮಾಡಲಾಗಿದೆ. ಸ್ಕ್ಯಾನಿಂಗ್‌ ಮಾಡಿದಾಗ ಗರ್ಭದಲ್ಲೇ ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಆಸ್ಪತ್ರೆಗೆ ದಾಖಲಾದ ನಂತರ ಕಿವಿಯೋಲೆ ಬಿಚ್ಚುವುದಾಗಿ ಗರ್ಭಿಣಿ ತಾನಾಗಿಯೇ ಹೊರಗೆ ಬಂದಿದ್ದಾರೆ. ಆ ವೇಳೆ ಹೆರಿಗೆಯಾಗಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.