ADVERTISEMENT

ಮೇಲುಕೋಟೆ: ಬೆಟ್ಟ ಏರಿದ ಸಾವಿರಾರು ಭಕ್ತರು

ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸದ ಪೂಜೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 5:29 IST
Last Updated 2 ಜನವರಿ 2025, 5:29 IST
<div class="paragraphs"><p><strong>ಹೊಸವರ್ಷದ ಹಿನ್ನಲೆ ಮೇಲುಕೋಟೆ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತರು.</strong></p></div>

ಹೊಸವರ್ಷದ ಹಿನ್ನಲೆ ಮೇಲುಕೋಟೆ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಭಕ್ತರು.

   

ಮೇಲುಕೋಟೆ: ಹೊಸ ವರ್ಷಾರಂಭದ ಮೊದಲ ದಿನವಾದ ಬುಧವಾರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯಗಳಲ್ಲಿ ವೈರಮುಡಿ ಜಾತ್ರೆಯ ನೆನಪಾಯಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಮುಗಿಬಿದ್ದು ದೇವರ ದರ್ಶನ ಪಡೆದರು.

ADVERTISEMENT

ಮುಂಜಾನೆಯಿಂದಲೇ ಪಂಚ ಕಲ್ಯಾಣಿಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ಕಲ್ಯಾಣಿ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯಕ್ಕೆ ತೆರಳಿದರು.

ಸನ್ನಿಧಿಗಳಲ್ಲಿ ಧನುರ್ಮಾಸದ ನಿಮಿತ್ತ ಸುರ್ಯೋದಯಕ್ಕೂ ಮುನ್ನ ಪೂಜೆ ಕೈಂಕರ್ಯ ಆರಂಭವಾಗಿತ್ತು. ವಿವಿಧ ಬಗೆಯ ಪುಪ್ಪಗಳಿಂದ ಕಂಗೊಳಿಸುತ್ತಿದ್ದ ಚೆಲುವನಾರಾಯಣ ಸ್ವಾಮಿಯ ದರ್ಶನಕ್ಕೆ ಸುಡುಬಿಸಿಲು ಲೆಕ್ಕಿಸದೆ ದೇವಾಲಯ ಮುಂದೆ ಸರತಿ ಸಾಲಿನಲ್ಲಿ ನಿಂತು. ಗೋವಿಂದ ಗೋವಿಂದ ಜಯಘೋಷ ಕೂಗುತ್ತಾ ದೇವರ ದರ್ಶನ ಪಡೆದರು.

ಯೋಗಾನರಸಿಂಹ ಸ್ವಾಮಿ ಬೆಟ್ಟವನ್ನು ಸಾವಿರಾರು ಭಕ್ತರು ಹತ್ತಿ ದೇವರ ದರ್ಶನ ಪಡೆದರು.

ಅಚ್ಚುಮೆಚ್ಚಿನ ಪ್ರವಾಸಿತಾಣ: ರಾಯಗೋಪುರ, ಅಕ್ಕತಂಗಿಕೊಳ, ಧನುಷ್ ಕೋಟಿ, ತೊಟ್ಟಿಲುಮಡು, ಕಲ್ಯಾಣಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ರಾತ್ರಿಯವರೆಗೂ ಪ್ರವಾಸಿಗರಿಂದ ತುಂಬಿ ತುಳುಕಿದವು. ಇಲ್ಲಿನ ತಾಣಗಳ ಸೌಂದರ್ಯಕ್ಕೆ ಪ್ರವಾಸಿಗರ ಮನಸೋತರು.

ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಪೊಲೀಸ್ ಇಲಾಖೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು. ದೇವಾಲಯಗಳಲ್ಲಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆ ನಡೆಯಂತೆ ಎಚ್ಚರ ವಹಿಸಿದರು.

ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ

ಕಿಕ್ಕೇರಿ: ಹೋಬಳಿಯ ವಿವಿಧ ಗ್ರಾಮಗಳಲ್ಲಿ ಹೊಸವರ್ಷವನ್ನು ವಿವಿಧ ದೇಗುಲಗಳಲ್ಲಿ ಬುಧವಾರ ವಿಶೇಷ ಪೂಜೆ, ಪ್ರಾರ್ಥನೆ ಮೂಲಕ ಸ್ವಾಗತಿಸಲಾಯಿತು.

ಕಿಕ್ಕೇರಿ ಬ್ರಹ್ಮೇಶ್ವರ ದೇಗುಲಕ್ಕೆ ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೂ ಸರತಿ ಸಾಳಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಸಿದ್ಧಾರೂಢಮಠದಲ್ಲಿ ದೇವರಿಗೆ ವಿವಿಧ ಅಭಿಷೇಕ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮದೇವತೆ ಕಿಕ್ಕೇರಮ್ಮನ ದೇಗುಲಕ್ಕೆ ಹೋಬಳಿಯ ವಿವಿಧೆಡೆಯಿಂದ ಜನರು ಆಗಮಿಸಿ ಪೂಜೆ ಸಲ್ಲಿಸಿದರು. ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ನಾಗಬನ, ಬೇವಿನಹಳ್ಳಿಯ ಅಂಕನಾಥೇಶ್ವರ ದೇಗುಲಕ್ಕೆ ನಾಗರಿಕರು ತಂಡೋಪ ತಂಡವಾಗಿ ತೆರಳಿ ಹೊಸವರ್ಷ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.

ಪಂಚಲಿಂಗೇಶ್ವರ ದೇಗುಲಕ್ಕೆ ಬಹುತೇಕ ಯುವಕರು ಸುಮಾರು 4 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ದರ್ಶನ ಪಡೆದು ಖುಷಿಪಟ್ಟರು.

ಹೋಬಳಿಯಾದ್ಯಂತ ಬೇಕರಿ ಅಂಗಡಿಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಭರ್ಜರಿ ವ್ಯಾಪಾರ ನಡೆಯಿತು. ಶಾಲಾ ಕಾಲೇಜು ಮಕ್ಕಳು ಕೇಕ್ ಮತ್ತಿತರ ತಿನಿಸುಗಳನ್ನು ಮುಂಗಡ ಕಾದಿರಿಸುವಿಕೆ (ಬುಕ್ಕಿಂಗ್) ಮಾಡಿಕೊಂಡು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದರು. ಹಲವರು ಪಟಾಕಿ ಸಿಡಿಸಿ ಮಧ್ಯರಾತ್ರಿಯಲ್ಲಿ ಹೊಸವರ್ಷವನ್ನು ಸ್ವಾಗತಿಸಿದರು.

ವಿಶೇಷ ಪೂಜೆ

ಭಾರತೀನಗರ: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರತೀನಗರ ಹಾಗೂ ಸುತ್ತಮುತ್ತಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಭಕ್ತಾದಿಗಳ ಸಂಭ್ರಮ ಜೋರಾಗಿಯೇ ಕಂಡು ಬಂದಿತು.

ಇಲ್ಲಿಯ ವೆಂಕಟೇಶ್ವರ, ಚಾಮುಂಡೇಶ್ವರಿ, ಶನೀಶ್ವರಸ್ವಾಮಿ, ಹನುಮಂತ ನಗರದ ಆತ್ಮಲಿಂಗೇಶ್ವರ ಸ್ವಾಮಿ, ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ಸ್ವಾಮಿ, ಕರಡಕೆರೆ ಆಂಜನೇಯಸ್ವಾಮಿ, ಕಾರ್ಕಹಳ್ಳಿ ಬಸವೇಶ್ವರಸ್ವಾಮಿ, ಕಾಡುಕೊತ್ತನಹಳ್ಳಿ ಮಹದೇಶ್ವರಸ್ವಾಮಿ, ದೊಡ್ಡಅರಸಿನಕೆರೆ ಆಂಜಣೇಯಸ್ವಾಮಿ, ಕಾಳಮ್ಮದೇವಿ, ಏಳೂರಮ್ಮ ದೇವಿ, ಮಠದ ಹೊನ್ನಾಯ್ಕನಹಳ್ಳಿ ಸಿದ್ದಪ್ಪಾಜಿ, ಮಠದದೊಡ್ಡಿ ಹರಿಹರೇಶ್ವರಸ್ವಾಮಿ ದೇವಾಲಯಗಳಲ್ಲಿ ದೇವರ ಮೂರ್ತಿಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಭಕ್ತರು ತಮ್ಮಿಷ್ಟದ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.