
ಕೆ.ಆರ್.ಪೇಟೆ: ಕಾಂಗ್ರೆಸ್ ನೇತೃತ್ವದ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್‌ನಿಂದ ಆಯೋಜಿಸಿದ್ದ ಪಕ್ಷದ ಸಮಾವೇಶ, ಪಕ್ಷ ಸೇರ್ಪಡೆ, ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿಗಳನ್ನು ನಿಗದಿತ ಸಮಯಕ್ಕೆ ನೀಡದೆ ರಾಜ್ಯ ಸರ್ಕಾರವು ಹಳಿತಪ್ಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ . ಶಿವಕುಮಾರ್ ಅವರ ನಡುವಿನ ಅಧಿಕಾರದಾಸೆಯ ಹಗ್ಗ–ಜಗ್ಗಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನನೆಗುದಿಗೆ ಬಿದ್ದಿವೆ ಎಂದು ದೂರಿದರು.
ಜೆಡಿಎಸ್ ಬಲಿಷ್ಟ:
‘ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾದ ಕೋಟೆ ಹೊಂದಿದೆ. ಇದು 2028ರ ವಿದಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಜಿಲ್ಲೆಯಿಂದ ಜೆಡಿಎಸ್ ಪಕ್ಷವನ್ನು ಹೊಡೆದೋಡಿಸಲು ಹಿಂಬಾಲಕರಿಗೆ ಮತ್ತು ಯುವಕರಿಗೆ ಕರೆ ನೀಡಿರುವದನ್ನು ನೋಡಿದರೆ ಅವರಿಗೆ ನಮ್ಮ ಪಕ್ಷದ ಮೇಲಿರುವ ಭಯ ತಿಳಿಯುತ್ತದೆ’ ಎಂದರು.
ನೇತೃತ್ವ ವಹಿಸಿದ್ದ ಶಾಸಕ ಎಚ್.ಟಿ. ಮಂಜು, ‘ತಾಲ್ಲೂಕಿನಲ್ಲಿ ಪಕ್ಷದ ಬೇರುಗಳು ಬಲಿಷ್ಟವಾಗಿವೆ. ನಮ್ಮದು ಕಾರ್ಯಕರ್ತರ ಪಕ್ಷ. ಯಾರು ಏನೇ ಕುತಂತ್ರ ಮಾಡಿದರೂ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಪಕ್ಷವನ್ನು ಹಾನಿ ಮಾಡಲು ಸಾಧ್ಯವಿಲ್ಲ’ ಎಂದರು.
ಕೆ.ಆರ್.ಪೇಟೆಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಶಾಸಕ ಎಚ್.ಟಿ.ಮಂಜು ಮತ್ತು ಬೆಂಬಲಿಗರು ಹಾಗೂ ಮನ್ಮುಲ್ ನಿರ್ದೇಶಕ ಡಾಲು ರವಿ ಮತ್ತು ಬೆಂಬಲಿಗರು ಪ್ರತ್ಯೇಕವಾಗಿ ಸ್ವಾಗತಿಸಿದರು.
ನಿಖಿಲ್ ಕುಮಾರಸ್ವಾಮಿ ಅವರ 38ನೇ ವರ್ಷದ ಜನ್ಮದಿನ ಆಚರಿಸಲಾಯಿತು.
ಉದ್ಯಮಿ ಮಡುವಿನಕೋಡಿ ಎಂ.ಆರ್.ಮನು ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಪ್ರಮುಖರಾದ ಅಶ್ವಿನ್ ಕುಮಾರ್, ಬಲ್ಲೇನಹಳ್ಳಿ ರಾಮಚಂದ್ರನ್, ಮಹಾದೇವೇಗೌಡ, ಕೆ.ಬಿ.ನಾಗೇಶ್, ವಿ. ಎಸ್.ಧನಂಜಯಕುಮಾರ್, ಎಸ್.ಎಲ್.ಮೋಹನ್, ಬಲದೇವ್, ಎಚ್.ಟಿ.ಲೋಕೇಶ್, ರೇಖಾ, ರತಿ ಮಹಾದೇವ್, ಗಾಯಿತ್ರಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.