ಮದ್ದೂರು: ‘ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ಅವರು ದಕ್ಷಿಣ ಭಾರತದವರು ಎನ್ನುವ ಕಾರಣಕ್ಕಾಗಿ ಪ್ರಧಾನಿ ಪಟ್ಟ ತಪ್ಪಿಸಿದರು ಎನ್ನುವ ನೋವು ನನ್ನನ್ನು ಕಾಡಿತ್ತು’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಆಯೋಜಿಸಿದ್ದ ಎಸ್.ಎಂ. ಕೃಷ್ಣ ಅವರ ಜನ್ಮ ದಿನಾಚರಣೆ ಹಾಗೂ ಎಸ್.ಎಂ.ಕೃಷ್ಣ ಸಮಷ್ಟಿ ಹಿತಚಿಂತನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಅವರನ್ನು ದೇಶದ ರಾಷ್ಟ್ರಪತಿಯನ್ನೂ ಮಾಡಲಿಲ್ಲ. ಈ ಬೇಸರದಿಂದಲೇ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಿದ್ದರು. ಅಜಾತಶತ್ರು, ಪರಿಣತ, ಪ್ರಬುದ್ಧ ರಾಜಕಾರಣಿಯನ್ನು ನಡೆಸಿಕೊಂಡ ರೀತಿ ಆ ದಿನಗಳಲ್ಲಿ ನೋವು ತಂದಿತ್ತು’ ಎಂದರು.
‘ಕೃಷ್ಣ ಅವರ ಪ್ರತಿಮೆಯನ್ನು ವಿಧಾನ ಸೌಧದ ಮುಂದೆ ನಿರ್ಮಿಸಬೇಕು. ವಿಧಾನ ಸೌಧಕ್ಕೆ ಬರುವ ಯುವ ರಾಜಕಾರಣಿಗಳಿಗೆ ಸ್ಫೂರ್ತಿ ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಎಸ್.ಎಂ. ಕೃಷ್ಣ ಸಮಷ್ಟಿ ಹಿತಚಿಂತನಾ ಪ್ರಶಸ್ತಿ’ ಸ್ವೀಕರಿಸಿದ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ನಾನು ಈ ಪ್ರಶಸ್ತಿಗೆ ಎಷ್ಟು ಅರ್ಹನೋ ಗೊತ್ತಿಲ್ಲ. ಎಸ್.ಎಂ.ಕೃಷ್ಣ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸ ತಂದಿದೆ’ ಎಂದರು.
‘ಕೃಷ್ಣ ಅವರು ಸಂಯಮಶೀಲ, ಸೃಜನಶೀಲ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಹೆಚ್ಚು ಗೌರವದಿಂದ ಕಾಣುವಂತಹ ವ್ಯಕ್ತಿತ್ವ ಹೊಂದಿದ್ದರು’ ಎಂದು ಹೇಳಿದರು.
ಶಾಸಕರಾದ ಕೆ.ಎಂ. ಉದಯ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ನಿವೃತ್ತ ನ್ಯಾಯಮೂರ್ತಿ ಶಿವಶಂಕರೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಕೃಷ್ಣ, ಸಾಹಿತಿ ತೈಲೂರು ವೆಂಕಟಕೃಷ್ಣ ಹಾಜರಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ. ಉದಯ್ ಮಾತನಾಡಿ ‘1998ರಿಂದ ಎಸ್.ಎಂ. ಕೃಷ್ಣ ಅವರನ್ನು ಕಾಣುತ್ತಿದ್ದೇನೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೋಗುತ್ತಿದ್ದಾಗ ಒಡನಾಟ ಬೆಳೆದಿತ್ತು. ಅವರಿಗೆ ಹಲಸಿನಹಣ್ಣು ಎಂದರೆ ಬಲು ಇಷ್ಟ. ನನ್ನ ತೋಟದಲ್ಲಿ ಬೆಳೆಯುತ್ತಿದ್ದ ಹಲಸಿನ ಹಣ್ಣನ್ನು ಪ್ರತಿವರ್ಷ ಕಳುಹಿಸುತ್ತಿದ್ದೆ’ ಎಂದು ಸ್ಮರಿಸಿದರು. ‘ಪಟ್ಟಣದ ಪ್ರಮುಖ ವೃತ್ತಕ್ಕೆ ಎಸ್.ಎಂ. ಕೃಷ್ಣ ಹೆಸರು ನಾಮಕರಣ ಮಾಡುವುದು. ಪುತ್ಥಳಿ ನಿರ್ಮಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.