ADVERTISEMENT

ಬಣ ರಹಿತ ದಲಿತ ಚಳವಳಿ ಕಟ್ಟೋಣ: ಪ್ರೊ.ಎಚ್.ಗೋವಿಂದಯ್

ದಲಿತ ಚಳವಳಿ ಕುರಿತ ಚಿಂತನಾ ಶಿಬಿರದಲ್ಲಿ ಚಳವಳಿಗಾರ ಪ್ರೊ.ಎಚ್.ಗೋವಿಂದಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 3:50 IST
Last Updated 28 ಮಾರ್ಚ್ 2021, 3:50 IST
ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಸಮೀಪದ ಉಳಿಗೆರೆ ಬಳಿ ಜನಪದ ಸೇವಾ ಟ್ರಸ್ಟ್‌ನ ಹೊಸ ಜೀವನ ದಾರಿ ಕೇಂದ್ರದಲ್ಲಿ ನಡೆದ ಬಣವಿಲ್ಲದ ದಲಿತ ಚಳವಳಿ ಕಟ್ಟೋಣ ಚಿಂತನಾ ಶಿಬಿರದಲ್ಲಿ ಪ್ರೊ.ಎಚ್.ಗೋವಿಂದಯ್ಯ ಮಾತನಾಡಿದರು
ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಸಮೀಪದ ಉಳಿಗೆರೆ ಬಳಿ ಜನಪದ ಸೇವಾ ಟ್ರಸ್ಟ್‌ನ ಹೊಸ ಜೀವನ ದಾರಿ ಕೇಂದ್ರದಲ್ಲಿ ನಡೆದ ಬಣವಿಲ್ಲದ ದಲಿತ ಚಳವಳಿ ಕಟ್ಟೋಣ ಚಿಂತನಾ ಶಿಬಿರದಲ್ಲಿ ಪ್ರೊ.ಎಚ್.ಗೋವಿಂದಯ್ಯ ಮಾತನಾಡಿದರು   

ಪಾಂಡವಪುರ: ‘ಪ್ರಸ್ತುತ ಇರುವ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳ ನಾಯಕರು ಬೇಸತ್ತಾದರೂ ತಮ್ಮ ತಮ್ಮ ಬಣವುಳ್ಳ ಸಂಘಟನೆಗಳನ್ನು ವಿಸರ್ಜಿಸಿ ಬಣಗಳಿಲ್ಲದ ದಲಿತ ಚಳವಳಿ ಕಟ್ಟೋಣ’ ಎಂದು ಕವಿ, ದಲಿತ ಚಳವಳಿಗಾರ ಪ್ರೊ.ಎಚ್.ಗೋವಿಂದಯ್ಯ ಕರೆ ನೀಡಿದರು.

ತಾಲ್ಲೂಕಿನ ಮೇಲುಕೋಟೆ ಸಮೀಪದ ಉಳಿಗೆರೆ ಬಳಿಯ ಜನಪದ ಸೇವಾಟ್ರಸ್ಟ್‌ನ ಹೊಸ ಜೀವನ ದಾರಿ ಕೇಂದ್ರದಲ್ಲಿ ಕರ್ನಾಟಕ ದಲಿತ
ಚಳವಳಿ ನವ ನಿರ್ಮಾಣ ವೇದಿಕೆ ಶನಿವಾರ ಆಯೋಜಿಸಿದ್ದ ‘ಬಣಗಳಲ್ಲಿದ ದಲಿತ ಚಳವಳಿ ಕಟ್ಟೋಣ’ ಚಿಂತನಾ ಶಿಬಿರದಲ್ಲಿ ಅವರು ಮಾತನಾಡಿದರು.

70ರ ದಶಕದಲ್ಲಿ ಸಮಾಜದ ದುಃಖಿತರು ಮತ್ತು ಜನರ ಅಭಿಲಾಷೆಯಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಇಂದು ಒಡೆದು ಹೋಳಾಗಿರುವುದಕ್ಕೆ ದಲಿತ, ಅಸಹಾಯಕ, ಶೋಷಿತ ಸಮುದಾಯ ದು:ಖಗೊಂಡಿದೆ. ಒಂದೇ ದಲಿತ ಸಂಘರ್ಷ ಸಮಿತಿ ಆಗಬೇಕೆಂಬದು ಜನರ ಅಭಿಲಾಷೆಯಾಗಿದೆ. ಈಗ ದಲಿತ ಚಳವಳಿ ಇಲ್ಲ. ಆದರೆ, ದಲಿತ ಚಳವಳಿ ಗಾರರು ಇದ್ದಾರೆ. ದಲಿತ ಚಳವಳಿ ಒಂದಾಗದಿದ್ದರೆ ದಲಿತ ಸಮುದಾಯಕ್ಕೆ ಉಳಿಗಾಲವಿಲ್ಲ ಎಂದರು.

ADVERTISEMENT

80ರ ದಶಕವು ದಲಿತ, ರೈತ ಚಳವಳಿ ಸೇರಿದಂತೆ ಪ್ರಗತಿಪರ ಚಳವಳಿಗಳ ಕಾಲ. ಹಾಗಾಗಿ ಕೋಮುವಾದ ವಿಜೃಂಭಿಸುತ್ತಿರಲಿಲ್ಲ. 1989ರಲ್ಲಿ ದೇಶದಲ್ಲಿ ಇಬ್ಬರು ಬಿಜೆಪಿ ಸಂಸದರು ಮಾತ್ರ ಇದ್ದರು. ಆದರೆ, ಇಂತಹ ಜನಪರ ಚಳವಳಿಗಳ ವಿಘಟನೆಗಳಿಂದಾಗಿ ದೇಶದಲ್ಲಿ ಕೋಮುವಾದ ವಿಜೃಂಭಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.

ದಲಿತ ಚಳವಳಿ ದೊಡ್ಡ ಶಕ್ತಿ: ಕಾಂಗ್ರೆಸ್ ದಲಿತರ ಪರ ಕೆಲಸ ಮಾಡುತ್ತಿತ್ತು. ಡಿ.ದೇವರಾಜ ಅರಸು ಅವರ ಸುಧಾರಣೆಗಳನ್ನು ಮರೆಯುವಂತಿಲ್ಲ. ಆದರೂ ಅರಸು ಆಡಳಿತದಲ್ಲಿದ್ದ ಭ್ರಷ್ಟಾಚಾರದ ವಿರುದ್ಧ ದಲಿತ ಚಳವಳಿ ದನಿ ಎತ್ತಿ ಸರ್ಕಾರ ಬೀಳಲು ಕಾರಣವಾಯಿತು. 1983ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬರಲು ದಲಿತ, ರೈತ ಚಳವಳಿಗಳು ಪ್ರಮುಖ ಪಾತ್ರವಹಿಸಿದ್ದವು ಎಂದರು.

ರೈತ ನಾಯಕಿ ಸುನಂದಾ ಜಯರಾಮ್ ಅವರು ಚಿಂತನಾ ಶಿಬಿರ ಉದ್ಫಾಟಿಸಿದರು. ದಲಿತ ಚಳವಳಿಗಾರ ಪ್ರೊ.ಬಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ದಲಿತ ಚಳವಳಿಗಾರರಾದ ಹರಿಹರ ಆನಂದಸ್ವಾಮಿ, ಎ.ಎಚ್.ಬಾಲಕೃಷ್ಣ, ಜನಪದ ಸೇವಾ ಟ್ರಸ್ಟ್‌ನ ಸಂತೋಷ್‌ ಕೌಲಗಿ, ಸಾಮಾಜಿಕ ನ್ಯಾಯ ಹೋರಾಟಗಾರ ಎನ್‌.ಆರ್.ಚಂದ್ರಶೇಖರ್, ಜಿ‌ಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಹೊಂಬಯ್ಯ, ದಲಿತ ವೇದಿಕೆಯಲ್ಲಿ ಇದ್ದರು. ಹುರುಗಲವಾಡಿ ರಾಮಯ್ಯ ಅವರು ಹೋರಾಟದ ಹಾಡುಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.