ADVERTISEMENT

ಮಂಡ್ಯ | ಕೂಲಿಕಾರರಿಗೆ ಅನ್ಯಾಯವಾದರೂ ಎಚ್‌ಡಿಕೆ ಮೌನ: ಎನ್‌.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:32 IST
Last Updated 21 ಜನವರಿ 2026, 4:32 IST
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಜಿಲ್ಲಾ ಯುವ ಸಮ್ಮೇಳನ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಶಾಸಕರನ್ನು ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಹಾಕಿ ಅಭಿನಂದಿಸಿದರು 
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಜಿಲ್ಲಾ ಯುವ ಸಮ್ಮೇಳನ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಶಾಸಕರನ್ನು ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಹಾಕಿ ಅಭಿನಂದಿಸಿದರು    

ಮಂಡ್ಯ: ‘ವಿಬಿ ಜೀ ರಾಮ್ ಜೀ’ಯಿಂದ ಕೂಲಿಕಾರರಿಗೆ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಎನ್‌ಡಿಎ ಮೈತ್ರಿಕೂಟದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮೌನ ವಹಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಟೀಕಿಸಿದರು. 

ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಜಿಲ್ಲಾ ಯುವ ಸಮ್ಮೇಳನ’ ಉದ್ಘಾಟಿಸಿ, ‘ನರೇಗಾ ಬಚಾವೊ ಸಂಗ್ರಾಮ್’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಪ್ರತಿ ಹಳ್ಳಿ– ಹಳ್ಳಿಯಲ್ಲೂ ನರೇಗಾ ಬಚಾವೋ ಹೋರಾಟ ನಡೆಸಿ, ‘ವಿಬಿ ಜೀ ರಾಮ್ ಜೀ’ ಯೋಜನೆಯಿಂದ ಆಗುವ ಅನ್ಯಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೆ ಈ ಕಾಯ್ದೆಗೆ ಬೆಂಬಲವಾಗಿ ನಿಂತಿರುವ ಜೆಡಿಎಸ್‌ ಅನ್ನೂ ಕಿತ್ತೊಗೆಯಬೇಕು ಎಂದು ಕರೆ ನೀಡಿದರು. 

ADVERTISEMENT

11 ವರ್ಷದಿಂದ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರು ಪ್ರಪಂಚವನ್ನು ಸುತ್ತಾಡಿರುವುದು ಮತ್ತು ₹56 ಲಕ್ಷ ಕೋಟಿಗಳಿದ್ದ ಸಾಲವನ್ನು ₹3 ಲಕ್ಷ ಕೋಟಿಗೆ ಹೆಚ್ಚಳ ಮಾಡಿರುವುದೇ ಮಹಾನ್ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ 50ರಷ್ಟು ಯುವಜನತೆಗೆ ಅವಕಾಶ ನೀಡಲಾಗುವುದು. ಅದಕ್ಕೂ ಮುನ್ನ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಆಗ ನಾವೇ ಗುರುತಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೆ.ಎಂ. ಉದಯ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್‌, ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಉಪಾಧ್ಯಕ್ಷ ಚಲುವರಾಜು, ಮನ್‌ಮುಲ್ ನಿರ್ದೇಶಕ, ಮಾಜಿ ಶಾಸಕ ಅಪ್ಪಾಜಿಗೌಡ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರಾದ ಆರ್.ವಿ. ದೇವರಾಜು, ಸತೀಶ್ ಸಿದ್ದಾರೂಢ, ಅಂಜನಾ ಶ್ರೀಕಾಂತ್, ಸಿ.ಎಂ. ದ್ಯಾವಪ್ಪ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಮಹಾತ್ಮ ಗಾಂಧಿ ಹೆಸರು ಅಳಿಸಿ ಕೋಟ್ಯಂತರ ಕೂಲಿಕಾರರಿಗೆ ಆಸರೆಯಾಗಿದ್ದ ‘ನರೇಗಾ’ ರದ್ದುಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ 
ಪಿ.ರವಿಕುಮಾರ್‌ ಶಾಸಕ

‘ಜೆಡಿಎಸ್‌ ನಾಟಕ ಕಂಪನಿಯಿದ್ದಂತೆ’ ಜೆಡಿಎಸ್‌ ಒಂದು ನಾಟಕ ಕಂಪೆನಿಯಿದ್ದಂತೆ. ಅಧಿಕಾರ ಮತ್ತು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಯಾರ ಜೊತೆಯಾದರೂ ಕೈಜೋಡಿಸುತ್ತಾರೆ. ಜಿಲ್ಲೆಯಲ್ಲಿ ನಾಯಕರನ್ನು ಬೆಳೆಸದೆ ತಮ್ಮ ಮಕ್ಕಳನ್ನು ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೋರಾಟ ಮಾಡುವ ಮೂಲಕ ಜಿಲ್ಲೆಯನ್ನು ಉಳಿಸಿಕೊಂಡಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ಗೌಡ ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.