ADVERTISEMENT

ತಿಂಗಳಿಗೊಮ್ಮೆ ಹುಂಡಿ ತೆರೆಯಲು ಕ್ರಮ: ಪೂಜಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 12:06 IST
Last Updated 12 ಸೆಪ್ಟೆಂಬರ್ 2020, 12:06 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಮಂಡ್ಯ: ‘ದೇವಾಲಯಗಳ ಭದ್ರತೆ ದೃಷ್ಟಿಯಿಂದ ಇನ್ನುಮುಂದೆ ತಿಂಗಳಿಗೊಮ್ಮೆ ಹುಂಡಿ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಕೊಲೆಯಾದ ಸಂತ್ರಸ್ತ ಕುಟುಂಬ ಸದಸ್ಯರಿಗೆ ಶನಿವಾರ ತಲಾ ₹ 5 ಲಕ್ಷ ಪರಿಹಾರ ಚೆಕ್‌ ವಿತರಣೆ ಮಾಡಿ ಅವರು ಮಾತನಾಡಿದರು.

‘ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಹಲವು ತಿಂಗಳುಗಳಿಂದ ಹುಂಡಿ ತೆರೆಯದೇ ಇರುವುದರಿಂದ ಘಟನೆ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಎ ದರ್ಜೆ ದೇವಾಲಯಗಳಲ್ಲಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು, ಬಿ ದರ್ಜೆ ದೇವಾಲಯಗಳಲ್ಲಿ ತಹಶೀಲ್ದಾರ್‌ ಸಮುಖದಲ್ಲಿ ತಿಂಗಳಿಗೊಮ್ಮೆ ಹುಂಡಿ ತೆರೆಯಲು ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ದೇವಾಲಯದಲ್ಲಿ ಸಿಸಿಟಿವಿ ಸರಿ ಇರಲಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದ್ದೇನೆ. ಅರ್ಚಕರನ್ನು ಕೊಂದ ಆರೋಪಿಗಳನ್ನು ಪೊಲೀಸರು ತಕ್ಷಣವೇ ಬಂಧಿಸುವ ಭರವಸೆ ನೀಡಿದ್ದಾರೆ’ ಎಂದರು.

ಇಒ ಅಮಾನತು: ‘ಹುಂಡಿ ತೆರೆಯದೇ ಕರ್ತವ್ಯಲೋಪ ಎಸಗಿರುವ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಅರವಿಂದ ಬಾಬು ಅವರನ್ನು ಅಮಾನತು ಮಾಡಲಾಗುವುದು’ ಎಂದು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದರು.

‘10 ತಿಂಗಳಿಂದ ಹುಂಡಿ ತೆರೆದಿಲ್ಲ, ಜೊತೆಗೆ ದೇವಾಲಯದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಳನ್ನು ಸುಸ್ಥಿತಿಯಲ್ಲಿ ಇಟ್ಟಿರಲಿಲ್ಲ. ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು ಅವರನ್ನು ಅಮಾನತು ಮಾಡಲಾಗುವುದು. ಭಾನುವಾರ ರಜೆ ಇದ್ದು ಸೋಮವಾರ ಆದೇಶ ಹೊರ ಬೀಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.