ಶ್ರೀರಂಗಪಟ್ಟಣ: ‘ಸಾಲು ಸಾಲು ಯುದ್ಧಗಳ ನಡುವೆಯೂ ಕೃಷಿ, ಕೈಗಾರಿಕೆ, ವಿಜ್ಞಾನ, ನೀರಾವರಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಶ್ರೀರಂಗಪಟ್ಟಣದಲ್ಲಿ ಸಂಶೋಧನಾ ಕೇಂದ್ರ ತೆರೆಯಬೇಕು’ ಎಂದು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ಪ್ರಜ್ಞಾವಂತರ ವೇದಿಕೆ ಹಾಗೂ ಮುಸ್ಲಿಂ ಸೌಹಾರ್ದ ಒಕ್ಕೂಟ ಏರ್ಪಡಿಸಿದ್ದ ಟಿಪ್ಪು ಸುಲ್ತಾನನ 226ನೇ ಪುಣ್ಯಸ್ಮರಣೆ ನಿಮಿತ್ತ ಟಿಪ್ಪು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಯುದ್ಧದಲ್ಲಿ ಪ್ರಯೋಗಿಸಿದ ಭಾರತದ ಮೊದಲ ದೊರೆ ಟಿಪ್ಪು ಸುಲ್ತಾನ್. ಆತನ ಕಾಲದಲ್ಲಿ ಮೈಸೂರು ರಾಜ್ಯ ಸಕ್ಕರೆ, ರೇಷ್ಮೆ, ಗಂಧದೆಣ್ಣೆ, ಸಂಬಾರ ಪದಾರ್ಥಗಳ ಉತ್ಪಾದನೆಗೆ ಪ್ರಸಿದ್ಧಿಯಾಗಿತ್ತು. ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಲು ಆತ ಅಡಿಗಲ್ಲು ಹಾಕಿದ್ದ ಎಂಬುದಕ್ಕೆ ಶಾಸನಾಧರವಿದೆ. ಸಾರಾಯಿ, ಜೂಜು, ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದ ಎಂಬುದಕ್ಕೆ ಆ ಕಾಲದ ಲಾವಣಿಗಳು ಸಾಕ್ಷಿ ಹೇಳುತ್ತವೆ. ಶೃಂಗೇರಿ, ನಂಜನಗೂಡು, ಶ್ರೀರಂಗಪಟ್ಟಣದ ದೇಗುಲಗಳಿಗೆ ನೆರವು ನೀಡಿದ್ದು, ಆತನ ಮತ್ತಷ್ಟು ಸಾಧನೆಗಳ ಬಗ್ಗೆ ಸಂಶೋಧನೆ ನಡೆಸಿ ಬೆಳಕು ಚೆಲ್ಲಬೇಕು’ ಎಂದು ಹೇಳಿದರು.
ಗಾಂಧಿವಾದಿ ಬಿ. ಸುಜಯಕುಮಾರ್ ಮಾತನಾಡಿ, ‘ಟಿಪ್ಪು ಬಗ್ಗೆ ಪೂರ್ವಗ್ರಹ ಸಲ್ಲದು. ಆತನ ಆಡಳಿತ, ಅಭಿವೃದ್ಧಿ ಕಾರ್ಯಗಳು ಮತ್ತು ಪರ ಧರ್ಮ ಸಹಿಷ್ಣುತೆ ಬಗ್ಗೆ ಅಧ್ಯಯನ ಮಾಡಬೇಕು. ಯುವ ಜನರಿಗೆ ಟಿಪ್ಪು ಕಾಲದ ನೈಜ ಇತಿಹಾಸವನ್ನು ತಿಳಿಸಬೇಕು’ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಮಾತನಾಡಿ, ‘ಟಿಪ್ಪು ಜಯಂತಿ ಮತ್ತು ಆತನ ಪುಣ್ಯ ಸ್ಮರಣೆಯನ್ನು ಸರ್ಕಾರವೇ ಆಚರಿಸಬೇಕು. ಮುಸ್ಲಿಂ ಧರ್ಮಕ್ಕೆ ಸೇರಿದವನು ಎಂಬ ಕಾರಣಕ್ಕೆ ಕೆಲವರು ಟಿಪ್ಪು ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾಡಿನ ರಕ್ಷಣೆಗಾಗಿ ಮಕ್ಕಳನ್ನೇ ಒತ್ತೆ ಇಟ್ಟು ರಾಜನನ್ನು ಟೀಕಿಸುವುದು ಸರಿಯಲ್ಲ’ ಎಂದರು.
ಮುಸ್ಲಿಂ ಸೌಹಾರ್ದ ವೇದಿಕೆ ಗೌರವಾಧ್ಯಕ್ಷ ಪ್ರೊ. ಇಲ್ಯಾಸ್ ಅಹಮದ್‌ಖಾನ್, ಅಧ್ಯಕ್ಷ ಅಪ್ಸರ್, ಕಾರ್ಯದರ್ಶಿ ಅಬ್ದುಲ್ ಸುಕ್ಕೂರ್, ಅಬ್ದುಲ್ಲಾ ಬೇಗ್ ಮಾತನಾಡಿದರು.
ರೈತ ಸಂಘದ ಅಧ್ಯಕ್ಷ ಶಂಭುಗೌಡ, ಸಂಚಾಲಕ ಪಾಂಡು, ಮಾನವ ಹಕ್ಕುಗಳ ಹೋರಾಟಗಾರ ಪಾಲಹಳ್ಳಿ ಪ್ರಸನ್ನ, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಬೆಳಗೊಳ ಬಸವಯ್ಯ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಎಂ. ಚಂದ್ರಶೇಖರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ, ಕರುನಾಡ ಸೇವಕರ ಪಡೆ ಅಧ್ಯಕ್ಷೆ ಪ್ರಿಯಾ ರಮೇಶ್, ಉಮರ್ ಫಾರೂಕ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಆಫ್ತಾಬ್ ಅಹಮದ್, ಸಾಧಿಕ್ ಪಾಷ, ಬಾಬು, ಎಜಾಸ್ ಪಾಷ, ಖೈರುನ್ನೀಸಾ, ಜಯಮ್ಮ, ಕಲಾವತಿ, ಅಯೂಬ್ ಷರೀಫ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.