ಪಾಂಡವಪುರ: 2020ರಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ‘ಜಲಜೀವನ್ ಮಿಷನ್ (ಜೆ.ಜೆ.ಎಂ) ಅಥವಾ ಮನೆ– ಮನೆಗೆ ಗಂಗೆ ಯೋಜನೆಯ ಕಾಮಗಾರಿಯು ತಾಲ್ಲೂಕಿನಲ್ಲಿ ತೆವಳುತ್ತಾ ಸಾಗುತ್ತಿದೆ. ಕಳಪೆ ಕಾಮಗಾರಿಯಿಂದ ಯೋಜನೆ ಹಳ್ಳ ಹಿಡಿದಿದೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪ ಮಾಡುತ್ತಾರೆ.
ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಆದರೆ ಇದುವರೆಗೂ ಇದು ಸಾಧ್ಯವಾಗಿಲ್ಲ. ಜತೆಗೆ ಪೂರ್ಣಗೊಂಡ ಕಾಮಗಾರಿಗಳನ್ನು ಸಂಬಂಧಿತ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕಿದೆ. ಆದರೆ ಈ ಯೋಜನೆಯ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿರುವುದರಿಂದ ಪಂಚಾಯಿತಿಯವರು ಹಸ್ತಾಂತರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಹಿಂದಿನ ನೀರು ಸರಬರಾಜಿನ ವ್ಯವಸ್ಥೆಯನ್ನೇ ಬಳಸಿಕೊಂಡು ಮನೆ– ಮನೆಗೆ ಪೈಪ್‌ಲೈನ್ ಅಳವಡಿಸಿ ನಲ್ಲಿ ಹಾಕಲಾಗಿದೆ. ಆದರೆ ನಲ್ಲಿಗೆ ಮೀಟರ್ ಅಳವಡಿಸಲಾಗಿದೆ. ಹೀಗಾಗಿ ನಲ್ಲಿಯಿಂದ ತೀರಾ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಬೇಸತ್ತ ಮಹಿಳೆಯರು ಮೀಟರ್ ಕಿತ್ತೆಸೆದು ಈ ಹಿಂದಿನ ನೀರಿನ ಸೌಲಭ್ಯವನ್ನೇ ಬಳಸಿಕೊಳ್ಳುತ್ತಿದ್ದಾರೆ. ಪ್ರತಿ ಮನೆಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಲ್ಲಿಗೆ ಮೀಟರ್ ಅಳವಡಿಸಿದ್ದು, ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ’ ಎಂದು ಮಹಿಳೆಯರು ದೂರುತ್ತಿದ್ದಾರೆ.
ಗ್ರಾಮಗಳಲ್ಲಿರುವ ಹಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದರೆ, ಮತ್ತಷ್ಟು ಮನೆಗಳಿಗೆ ನೀರೇ ಬರುತ್ತಿಲ್ಲ. ಮೇಲ್ಭಾಗದಲ್ಲಿರುವ ಮನೆಗಳಿಗೆ ನೀರು ತಲುಪುತ್ತಿಲ್ಲ, ಮೀಟರ್ ಅಳವಡಿಕೆಯಿಂದಾಗ ಒಂದು ಮನೆಯಿಂದ ಮತ್ತೊಂದು ಮನೆಗೆ ಪೂರೈಕೆಯಾಗಬೇಕಾದರೆ ಸಾಕಷ್ಟು ಕಾಲ ಬೇಕಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ.
‘ಪೈಪ್‌ಲೈನ್ ಅಳವಡಿಕೆ ಕಳಪೆಯಾಗಿದ್ದು, ಪೈಪ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಯೋಜನೆಯಿಂದ ನಮಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಕೆ.ಬೆಟ್ಟಹಳ್ಳಿ ಗ್ರಾಮದ ನಾಗರಾಜು, ಜಯರಾಮೇಗೌಡ, ದೇವರಾಜು ಮತ್ತು ಅರುಣಾ ಹೇಳುತ್ತಾರೆ.
ನೀರು ಬಳಕೆಗಾಗಿ ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಿರುವುದು ಪ್ರಯೋಜನಕ್ಕೆ ಬರುತ್ತಿಲ್ಲ. ಆ ಮೀಟರ್‌ನಲ್ಲೂ ನೀರು ಸೋರಿಕೆಯಾಗುತ್ತಿದೆ. ಮೇಲ್ಭಾಗದ ಬೀದಿಗಳಿಗೆ ನೀರು ತಲುಪುತ್ತಿಲ್ಲ. ಮೂರು ದಿನಗಳಿಗೊಮ್ಮೆ ನೀರು ಬಿಡುಲಾಗುತ್ತಿದೆ. ಜಲಜೀವನ್ ಯೋಜನೆಯಿಂದ ನಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಶಂಭೂನಹಳ್ಳಿ ಗ್ರಾಮದ ಮಹಿಳೆಯರಾದ ಅಶ್ವಿನಿ, ವಿನುತಾ, ಸೋನು ಅಭಿಪ್ರಾಯಪಡುತ್ತಾರೆ.
ಕುಡಿಯುವ ನೀರು ಯೋಜನೆಗಳು:
ತಾಲ್ಲೂಕಿನ ಈಗಾಗಲೇ 63 ಗ್ರಾಮಗಳಿಗೆ ನೇರವಾಗಿ ಕೆಆರ್‌ಎಸ್‌ನಿಂದ ನೀರು ಪೂರೈಕೆಯಾಗುತ್ತಿದೆ, 33 ಗ್ರಾಮಗಳಿಗೆ ತೊಣ್ಣೂರು ಕೆರೆಯಿಂದ ನೀರು ಸರಬರಾಜಾಗುತ್ತಿದೆ ಹಾಗೂ ಬೋರ್‌ವೆಲ್ ಮತ್ತಿತ್ತರ ಮೂಲಗಳಿಂದ 81 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಈ ನೀರಿನ ಮೂಲಗಳನ್ನೇ ಬಳಸಿಕೊಂಡು ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಈ ಯೋಜನೆ ಸಮರ್ಪಕವಾಗಿ ಉಪಯೋಗಕ್ಕೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
Highlights - null
Quote - ಅಮೃತ ಯೋಜನೆಯ ಕಾಮಗಾರಿಗಾಗಿ ರಸ್ತೆಯಲ್ಲಿ ಗುಂಡಿ ತೋಡುತ್ತಿದ್ದು ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ – ಚೌಡಪ್ಪ ಎಂಜಿನಿಯರ್ ಪಾಂಡವಪುರ ಪುರಸಭೆ
Cut-off box - ₹65 ಕೋಟಿ ವೆಚ್ಚದ ಯೋಜನೆ ‘ಪಾಂಡವಪುರ ತಾಲ್ಲೂಕಿನಲ್ಲಿ 177 ಹಳ್ಳಿಗಳಿಗೂ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಲು ₹65.28 ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಮೂರು ಹಂತಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈಗ 58 ಹಳ್ಳಿಗಳಲ್ಲಿ ಮಾತ್ರ ಯೋಜನೆ ಪೂರ್ಣಗೊಂಡಿದೆ. ಪ್ರತಿ ಮನೆಯ ಪ್ರತಿ ವ್ಯಕ್ತಿಗೆ ನಿತ್ಯ ಕನಿಷ್ಠ 55 ಲೀಟರ್ ಶುದ್ಧ ನೀರು ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯವರು ಜನರಿಗೆ ಜಾಗೃತಿ ಮೂಡಿಸಿ ಇದರ ನಿರ್ವಹಣೆ ಮಾಡಬೇಕಿದೆ ಎನ್ನುತ್ತಾರೆ’ ಗ್ರಾಮೀಣ ಕುಡಿಯವ ನೀರು ಯೋಜನೆಯ ಸಹಾಯಕ ಎಂಜಿನಿಯರ್ ಕುಮಾರ್.
Cut-off box - //2 ಮಗ್‌ಶಾಟ್ ಫೋಟೊಗಳಿವೆ// ಏನು ಅಂತಾರೆ? ಜೆಜೆಎಂ ಕಾಮಗಾರಿ ಕಳಪೆ ‘ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯು ಕಳಪೆಯಾಗಿದೆ. ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದರೂ ಸಮರ್ಪಕ ನೀರು ದೊರೆಯುತ್ತಿಲ್ಲ. ಮುಖ್ಯವಾಗಿ ಶುದ್ದ ನೀರು ದೊರೆಯುತ್ತಿಲ್ಲ’ – ಸಣ್ಣನಿಂಗೇಗೌಡ ರೈತ ಮುಖಂಡ ಸೀತಾಪುರ *** ‘ಗುತ್ತಿಗೆದಾರರ ಜೇಬು ತುಂಬುತ್ತಿದೆ’ ‘ಈ ಹಿಂದೆ ನಮ್ಮೂರಿಗೆ ನೀರಿನ ಸೌಲಭ್ಯವಿತ್ತು. ಈಗ ಪ್ರತಿ ಮನೆಗೆ ನೀರು ಕೊಡುತ್ತೇವೆ ಎಂದು ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆಯೋ ಹೊರತು ಅನುಕೂಲವಾಗುತ್ತಿಲ್ಲ. ಈ ಯೋಜನೆಯ ಅಗತ್ಯವೂ ಇರಲಿಲ್ಲ. ಗುತ್ತಿಗೆದಾರರ ಜೇಬು ತುಂಬುತ್ತಿದೆ ಅಷ್ಟೇ’ – ಬಿ.ಕೆ.ರವಿ ಸಾಮಾಜಿಕ ಕಾರ್ಯಕರ್ತ ಬಳೇಅತ್ತಿಗುಪ್ಪೆ *** ಬಿಲ್ ಕಟ್ಟುವ ಭಯದಿಂದ ಮೀಟರ್‌ಗೆ ಹಾನಿ ಸರ್ಕಾರದಿಂದ ಸರಿಯಾಗಿ ಬಿಲ್ ಆಗುತ್ತಿರಲಿಲ್ಲ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ನೀರು ಸಣ್ಣ ಪ್ರಮಾಣದಲ್ಲಿ ಬರುತ್ತಿದೆ ಎಂಬ ಕಾರಣಕ್ಕೆ ಮತ್ತು ನೀರಿನ ಬಿಲ್ ಕಟ್ಟಬೇಕಾಗುತ್ತದೆ ಎಂಬ ಭಯದಿಂದ ಮೀಟರ್ ಕಿತ್ತು ಹಾಕಿರಬೇಕು. ಕಾಮಗಾರಿ ಕಳಪೆ ಎಂಬುದು ಸತ್ಯಕ್ಕೆ ದೂರವಾದುದು – ಮಮತಾ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಪಾಂಡವಪುರ ***
Cut-off box - ‘ಅಮೃತ ಯೋಜನೆ; ಹಳ್ಳಬಿದ್ದ ರಸ್ತೆಗಳು’ ‘ಪಾಂಡವಪುರ ಪಟ್ಟಣದಲ್ಲಿ ಮನೆ– ಮನೆಗಳಿಗೆ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರವು ಅಮೃತ ನಗರೋತ್ಥಾನ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದ ಪಟ್ಟಣದ ಡಾಂಬರು ಮತ್ತು ಕಾಂಕ್ರೀಟ್ ರಸ್ತೆಗಳು ಹಾಳಾಗಿ ಹಳ್ಳ ಬಿದ್ದಿವೆ’ ಎಂದು ನಾಗರಿಕರು ದೂರಿದ್ದಾರೆ. ವಿಶ್ವೇಶ್ವರಯ್ಯ ನಾಲೆ ಹಾಗೂ ಕಾವೇರಿ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಾಗುತ್ತಿದೆ. ಇದನ್ನು ಬಳಸಿಕೊಂಡು ಪಟ್ಟಣದಲ್ಲಿ ಅಮೃತ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ₹23 ಕೋಟಿ ಅಂದಾಜು ವೆಚ್ಚದಲ್ಲಿ 2024 ಮಾರ್ಚ್ ತಿಂಗಳಲ್ಲಿ ಪ್ರಾರಂಭಗೊಂಡ ಈ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿಗಾಗಿ ರಸ್ತೆಗಳಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು ಪೈಪ್‌ಲೈನ್ ಅಳವಡಿಸಲಾಗಿದೆ. ಪೈಪ್‌ಲೈನ್ ಅಳವಡಿಕೆ ಬಳಿಕ ಗುಂಡಿ ಮುಚ್ಚದೇ ಇರುವುದರಿಂದ ಸಂಚಾರ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ. ‘ಸುಮಾರು ₹16 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಂಡಿದ್ದ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆಗಳು ಹಾಳಾಗಿ ಹೋಗಿವೆ. ತೆಗೆದ ಗುಂಡಿಯನ್ನು ಮುಚ್ಚುತ್ತಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.