ಮದ್ದೂರು: ‘ಗೋನಿಯೋಜಸ್ ಪರೋಪಜೀವಿ ಉತ್ಪಾದನಾ ಪ್ರಯೋಗ ಶಾಲೆಯಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಕೆ. ಎಂ ಉದಯ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಯೋಜನೆಯಡಿ ಪಟ್ಟಣದ ತೋಟಗಾರಿಕೆ ಇಲಾಖೆ ಕಟ್ಟಡದ ಬಳಿ ನಿರ್ಮಿಸಿರುವ ಗೋನಿಯೋಜಸ್ ಪರೋಪ ಜೀವಿ ಉತ್ಪಾದನಾ ಪ್ರಯೋಗ ಶಾಲೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ರೈತರಿಗೆ ತೆಂಗು ಬೆಳೆ ಆರ್ಥಿಕ ಮೂಲಗಳ ಬೆಳೆಯಾಗಿದ್ದು, ಹಲವು ವರ್ಷಗಳಿಂದ ತೆಂಗು ಬೆಳೆಗೆ ನುಸಿಪೀಡೆ ರೋಗ ಹಾಗೂ ಕಪ್ಪು ತಲೆಹುಳು ಕಾಟದಿಂದಾಗಿ ರೈತರು ತೊಂದರೆಗೊಳಗಾಗಿದ್ದರು. ಈ ಪ್ರಯೋಗಶಾಲೆಯಿಂದ ಕೀಟಬಾಧೆಗಳನ್ನು ಹತೋಟಿಗೆ ತರಬಹುದು’ ಎಂದರು.
ತೊಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗದಿತ ಸಮಯಕ್ಕೆ ತೆಂಗಿಗೆ ಯಾವುದೇ ರೀತಿ ರೋಗ ಬಾರದಂತೆ ಕೀಟನಾಶಕ ಸಂಪಡಣೆ, ಬೇವಿನ ಹಿಂಡಿ ವಿತರಣೆ ಹಾಗೂ ರೈತರಿಗೆ ವಿಶೇಷ ಕಾರ್ಯಾಗಾರಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ರೋಗದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’ ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕಿ ಕೆ.ಎಂ.ರೇಖಾ ಮಾತನಾಡಿ, ‘2025 -26ರ ನರೇಗಾ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿರುವ ರೈತರು ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯಡಿ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಹನಿ ನೀರಾವರಿ ಯೋಜನೆ ಅಡಿ ಶೇ 90ರಷ್ಟು ಸಹಾಯ ಧನವಿದ್ದು (ಅಡಿಕೆ ಬೆಳೆ ಹೊರತುಪಡಿಸಿ)ಇದರ ಉಪಯೋಗವನ್ನು ಪಡೆದುಕೊಳ್ಳುಬೇಕು’ ಎಂದರು.
‘ತಾಳೆ ಗಿಡಗಳನ್ನು ಇಲಾಖೆಯಿಂದ ಉಚಿತವಾಗಿ ಪಡೆದು ನಾಟಿ ಮಾಡಿ ನಿರ್ವಹಣೆ ಮತ್ತು ಇತರೆ ಸೌಲಭ್ಯಗಳಿಗೆ ಸಹಾಯಧನ ಪಡೆಯಬಹುದು’ ಎಂದರು.
ಇಲಾಖೆಯ ಸಿಬ್ಬಂದಿ ಸಂಪತ್, ಪದ್ಮ, ದಿವ್ಯಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.