ADVERTISEMENT

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕೆ.ಸಿ.ನಾರಾಯಣಗೌಡರಿಂದ ವಾರಕ್ಕೊಂದು ಭರ್ಜರಿ ಬಾಡೂಟ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 12:57 IST
Last Updated 8 ಮಾರ್ಚ್ 2023, 12:57 IST
ಬೂಕನಕೆರೆಯಲ್ಲಿ ಸಚಿವ ನಾರಾಯಣಗೌಡ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜನರು ಬಾಡೂಟ ಸವಿದರು
ಬೂಕನಕೆರೆಯಲ್ಲಿ ಸಚಿವ ನಾರಾಯಣಗೌಡ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜನರು ಬಾಡೂಟ ಸವಿದರು   

ಮಂಡ್ಯ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅವರು ತಮ್ಮ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ವಾರಕ್ಕೊಂದು ಬಾಡೂಟ ಕಾರ್ಯಕ್ರಮ ಆಯೋಜಿಸುತ್ತಿರುವುದು ಗಮನ ಸೆಳೆಯುತ್ತಿದೆ.

ಕಳೆದ 15 ದಿನಗಳಿಂದ ಹೋಬಳಿವಾರು ಬಾಡೂಟ ಕಾರ್ಯಕ್ರಮ ನಡೆಯುತ್ತಿದ್ದು ಸಾವಿರಾರು ಜನರು ಭಾಗವಹಿಸಿ ಊಟ ಸವಿಯುತ್ತಿದ್ದಾರೆ. ಈಗಾಗಲೇ ಸಂತೇಬಾಚಹಳ್ಳಿ, ಶೀಳನೆರೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿರುವ ಬಾಡೂಟ ಕಾರ್ಯಕ್ರಮ ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ. ಬುಧವಾರ ಬೂಕನಕೆರೆಯಲ್ಲಿ ನಡೆದ ಬಾಡೂಟದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ.

ಟನ್‌ಗಟ್ಟಲೆ ಮಟನ್‌, ಚಿಕನ್‌, ಮೀನು, ಮೊಟ್ಟೆಯ ಭರ್ಜರಿ ಬಾಡೂಟ ಸವಿಯಲು ಸುತ್ತಮುತ್ತಲಿನ ಹಳ್ಳಿಗಳ ಜನರು ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲ ಹಳ್ಳಿಗಳಿಂದ ಜನರನ್ನು ಕರೆತರಲು ವಾಹನ ವ್ಯವಸ್ಥೆಯನ್ನೂ ಮಾಡಿಸಲಾಗಿದೆ. ಪ್ರತಿ ಕಾರ್ಯಕ್ರಮದಲ್ಲೂ ಸಾರ್ವಜನಿಕ ಸಮಾರಂಭ ನಡೆಯುತ್ತಿದ್ದು ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ನಾರಾಯಣಗೌಡರು ಜನರಿಗೆ ಮನವಿ ಮಾಡುತ್ತಿದ್ದಾರೆ.

ADVERTISEMENT

ಬೂಕನಕೆರೆ ಸಮಾರಂಭದಲ್ಲಿ ಮಾತನಾಡಿದ ನಾರಾಯಣಗೌಡ ‘ತಾಲ್ಲೂಕಿನ ಋಣ ತೀರಿಸುವ ಉದ್ದೇಶದಿಂದ ಹಳ್ಳಿಹಳ್ಳಿಯಲ್ಲಿ ಜನರನ್ನು ಭೇಟಿಯಾಗುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದರೆ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಜನ ಸೇವೆ ಮಾಡಿಕೊಂಡು ಇರುತ್ತೇನೆ’ ಎಂದರು.

ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮತದಾರರನ್ನು ಸೆಳೆಯಲು ಅವರು ಬಾಡೂಟ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.