ಕಿಕ್ಕೇರಿ: ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಕೆಡಿಪಿ ಮೂಲಕ ಕಾರ್ಯವ್ಯಾಪ್ತಿ ವಿಶಾಲವಾಗಿದ್ದು, ಚಳಿ ಬಿಟ್ಟು ಕೆಲಸ ಮಾಡಿ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಸಾಸಲು ಗ್ರಾಮದಲ್ಲಿ ಭಾನುವಾರ ಬಿ.ಆರ್. ಅಂಬೇಡ್ಕರ್ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿದರು.
‘ಪಿಡಿಒಗಳು ಅಂಜದೇ ಗ್ರಾಮಾಭಿವೃದ್ಧಿಗೆ ಕೆಲಸ ಮಾಡಿ. ಸಂಘಕ್ಕೆ ₹5 ಲಕ್ಷ ಅನುದಾನ ಬಂದಿದೆ. ಅನುದಾನ ಹಣವನ್ನು ಹಂಚಿಕೊಳ್ಳದೆ ಮತ್ತಷ್ಟು ಹಣವನ್ನು ಬ್ಯಾಂಕ್‌ಗಳಲ್ಲಿ ಸಾಲವಾಗಿ ಪಡೆಯಿರಿ. ಕುಕ್ಕುಟ ಫಾರಂ ಆರಂಭಿಸಿ. ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರು ಸ್ವಾವಲಂಬಿಗಳಾಗಲು ಸಾಕಷ್ಟು ಸವಲತ್ತುಗಳಿದ್ದು, ಸದ್ಬಳಕೆ ಮಾಡಿಕೊಳ್ಳಿ’ ಎಂದರು.
‘ಸಂಘದ ಮಹಿಳೆಯರು ಗ್ರಾಮದಲ್ಲಿ ಸಣ್ಣಪುಟ್ಟ ಸಮಾರಂಭ ಮಾಡಲು ಸಮಸ್ಯೆಯಾಗಿದ್ದು, ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿಕೊಡಿ’ ಎಂದರು.
‘ಗ್ರಾಮದ ಬಹುತೇಕ ರಸ್ತೆಗಳು ಗುಂಡಿಬಿದ್ದಿದ್ದು, ಚರಂಡಿ, ಸೇತುವೆ ಮಾಡದೆ ರಸ್ತೆ ಕಾಮಗಾರಿ ಮಾಡಲಾಗಿದೆ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.
ಸೂಕ್ತ ಮಾಹಿತಿ ಪಡೆದು ಲೋಪವಾಗಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಶಾಸಕರು ನುಡಿದರು.
ಐಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಶಂಭುಲಿಂಗಯ್ಯ, ಉಪಾಧ್ಯಕ್ಷ ಈರಾಜು, ಐನೋರಹಳ್ಳಿ ಮಲ್ಲೇಶ್, ಕರವೇ ಗುರುಮೂರ್ತಿ, ಪಿಡಿಒ ವಿಜಯ್, ಡೇರಿ ಜಗದೀಶ್, ಸಂಘದ ಚಿನ್ನಮ್ಮ, ಶಿವಮ್ಮ, ಜಯಮ್ಮ, ನಿಂಗಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.