ADVERTISEMENT

ಕೋವಿಡ್‌ ಲಸಿಕೆ ಪಡೆಯಲು ಹೆಚ್ಚಿದ ಆಸಕ್ತಿ

ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಲಿಸಿಕಾ ಕೇಂದ್ರಗಳಲ್ಲಿ ಜನರ ಸಾಲು, ನೆಪ ಬಿಟ್ಟ ಜನರು

ಎಂ.ಎನ್.ಯೋಗೇಶ್‌
Published 19 ಏಪ್ರಿಲ್ 2021, 12:49 IST
Last Updated 19 ಏಪ್ರಿಲ್ 2021, 12:49 IST
ಕೋವಿಡ್‌ ಲಸಿಕೆ ಪಡೆಯಲು ಜನರು ಮಿಮ್ಸ್‌ ಲಸಿಕಾ ಕೇಂದ್ರದಲ್ಲಿ ಸಾಲುಗಟ್ಟಿ ಕುಳಿತಿರುವುದು
ಕೋವಿಡ್‌ ಲಸಿಕೆ ಪಡೆಯಲು ಜನರು ಮಿಮ್ಸ್‌ ಲಸಿಕಾ ಕೇಂದ್ರದಲ್ಲಿ ಸಾಲುಗಟ್ಟಿ ಕುಳಿತಿರುವುದು   

ಮಂಡ್ಯ: ಇಷ್ಟು ದಿನ ಕೋವಿಡ್‌ ಲಸಿಕೆ ಪಡೆಯಲು ಜನರು ನಿರಾಸಕ್ತಿ ತೋರುತ್ತಿದ್ದರು, ಮದುವೆ, ಹಬ್ಬ, ಜಾತ್ರೆಗಳ ನೆಪ ಹೇಳುತ್ತಿದ್ದರು. ಆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಲ್ಲಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಏ.1ರಿಂದ 4ನೇ ಹಂತದ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಿದ್ದು 45 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯುತ್ತಿದ್ದಾರೆ. 60 ವರ್ಷಕ್ಕೆ ಮೇಲ್ಪಟ್ಟವರು ತೋರಿದ ಸ್ಪಂದನೆ 45 ವರ್ಷದಿಂದ ಮೇಲ್ಪಟ್ಟವರಿಂದ ದೊರೆತಿರಲಿಲ್ಲ. ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಲಸಿಕೆ ಪಡೆಯಲು ಪ್ರೇರಣೆ ನೀಡಲಾಗುತ್ತಿತ್ತು. ಆರೋಗ್ಯ ಉಪ ಕೇಂದ್ರಗಳಲ್ಲೂ ಶಿಬಿರ ಆಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿತ್ತು. ಆದರೂ ಜನರು ನೆಪ ಹೇಳುತ್ತಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು.

ಆದರೆ ನಾಲ್ಕೈದು ದಿನಗಳಿಂದ ಲಸಿಕಾ ಕೇಂದ್ರಗಳಿಗೆ ಅಪಾರ ಸಂಖ್ಯೆಯ ಜನರು ಬರುತ್ತಿದ್ದಾರೆ. ಜನರು ಸಾಲುಗಟ್ಟಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಮಿಮ್ಸ್‌ ಆಸ್ಪತ್ರೆ ಮಾತ್ರವಲ್ಲದೇ ತಾಲ್ಲೂಕು ಆಸ್ಪತ್ರೆಗಳು, ಪಿಎಚ್‌ಸಿ, ಉಪಕೇಂದ್ರಗಳಲ್ಲೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜನದಟ್ಟಣೆಯನ್ನು ನಿಯಂತ್ರಿಸಲು ನೂತನ ಕ್ಯಾನ್ಸರ್‌ ಆಸ್ಪತ್ರೆಯ ಕಟ್ಟಡಕ್ಕೆ ಲಸಿಕಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.

ADVERTISEMENT

ಜನರು ಸಾಲಿನಲ್ಲಿ ಅಂತರ ಕಾಯ್ದುಕೊಂಡು ನಿಲ್ಲಲು ಸಹಾಯಕವಾಗುವಂತೆ ಹೊಸ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ನೀಡಿದ ನಂತರ ಆರ್ಧ ಗಂಟೆ ವೈದ್ಯರ ನಿಗಾದಲ್ಲಿ ಕೂರಿಸಿ ನಂತರ ಕಳುಹಿಸಲಾಗುತ್ತಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 45 ವರ್ಷ ವಯಸ್ಸು ಮೇಲ್ಪಟ್ಟವರು ಶೇ 27.34ರಷ್ಟಿದ್ದು ಶೀಘ್ರ ಗುರಿ ಸಾಧನೆ ಮಾಡುವ ಗುರಿ ಆರೋಗ್ಯ ಇಲಾಖೆ ಸಿಬ್ಬಂದಿಗಿದೆ.

ಗ್ರಾಮೀಣ ಪ್ರದೇಶ ಜನರು ಕೂಡ ಆರಂಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತರುವ ಸ್ಥಿತಿ ಇತ್ತು.

ಯುಗಾದಿ ಹಬ್ಬಕ್ಕೂ ಮೊದಲು ಜನರು ಹಲವು ನೆಪಗಳನ್ನು ಹೇಳುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಜಾಗೃತಿ ಮೂಡಿಸುವ ಅಗತ್ಯವೂ ಇಲ್ಲ. ಜನರು ಸ್ವಯಂಪ್ರೇರಿತವಾಗಿ ಲಸಿಕಾ ಕೇಂದ್ರಕ್ಕೆ ಬಂದು ಚುಚ್ಚುಮದ್ದು ಪಡೆಯುತ್ತಿದ್ದಾರೆ.

‘ಇನ್ನೂ ಸ್ವಲ್ಪದಿನ ನೋಡೋಣ ಎಂಬ ಭಾವನೆ ಇತ್ತು, ಆದರೆ ಸೋಂಕು ಎಲ್ಲಾ ಕಡೆ ಹರಡುತ್ತಿದೆ. ಹಳ್ಳಿಗಳಲ್ಲೂ ವ್ಯಾಪಿಸಿದೆ. ಹೀಗಾಗಿ ನಾನೇ ಬಂದು ಲಸಿಕೆ ಹಾಕಿಸಿಕೊಂಡಿದ್ದೇನೆ’ ಗುತ್ತಲು ಬಡಾವಣೆಯ ಅಶೋಕ್‌ ತಿಳಿಸಿದರು.

ನಾಲ್ಕನೇ ಲಸಿಕಾ ಅಭಿಯಾನದಲ್ಲಿ ಇಲ್ಲಿಯವರೆಗೆ ಶೇ 45ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹೆಚ್ಚಿನ ಜನರಿಗೆ ಲಸಿಕೆ ಹಾಕಲಾಗಿದೆ. ಮಿಮ್ಸ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲಿ ಸಮರೋಪಾದಿಯಲ್ಲಿ ಲಸಿಕೆ ಹಾಕಲಾಗುತ್ತಿದೆ.

‘ಕೋವಿಡ್‌ ಸ್ಥಿತಿ ಜನರ ಅರಿವಿಗೆ ಬರುತ್ತಿದೆ. ಸೋಂಕಿನಿಂದ ಸತ್ತವರು, ಆಂಬುಲೆನ್ಸ್‌ಗಳ ಸಾಲು, ಹೆಚ್ಚುತ್ತಿರುವ ರೋಗಿಗಳನ್ನು ನೋಡುತ್ತಿದ್ದಾರೆ. ಸತ್ತವರಲ್ಲಿ ಬಹುಪಾಲು ಜನರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಹೀಗಾಗಿ ಜನರೇ ನೇರವಾಗಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಅಗತ್ಯವಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

****

ಲಸಿಕೆ ಸಿಗದಿದ್ದರೆ ಜಗಳ

ಮಿಮ್ಸ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೂ ಕೋವಿಡ್‌ ಲಸಿಕೆಯ ಕೊರತೆ ಉಂಟಾಗಿಲ್ಲ. ಆದರೆ ಪಿಎಚ್‌ಸಿ, ಉಪ ಕೇಂದ್ರಗಳಲ್ಲಿ ಲಸಿಕೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಜನರು ಸಿಬ್ಬಂದಿಯ ವಿರುದ್ಧ ಜಗಳಕ್ಕಿಳಿಯುವುದು, ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ.

‘ಎರಡು ದಿನಕ್ಕೊಮ್ಮೆ ಜಿಲ್ಲೆಗೆ ಲಸಿಕೆ ಸರಬರಾಜಾಗುತ್ತಿದೆ. ಒಮ್ಮೊಮ್ಮೆ ಡೋಸ್‌ಗಳು ಬೇಗನೆ ಮುಗಿದು ಹೋಗುತ್ತವೆ. ಅಂತ ಸಂದರ್ಭದಲ್ಲಿ ನಾವು ಜನರಿಗೆ ತಿಳಿಸುತ್ತೇವೆ. ಲಸಿಕೆ ಬರುವವರೆಗೂ ಕಾದು ಸಿಬ್ಬಂದಿಗೆ ಜನರು ಸಹಕಾರ ನೀಡಬೇಕು’ ಎಂದು ಡಿಎಚ್‌ಒ ತಿಳಿಸಿದರು.

********

ಮಿಮ್ಸ್‌: 30 ವೆಂಟಿಲೇಟರ್‌ ಭರ್ತಿ

ಸಕ್ರಿಯ ಪ್ರಕರಣಗಳ ಸಂಖ್ಯೆ ಜಿಲ್ಲೆಯಾದ್ಯಂತ ಹೆಚ್ಚಳವಾಗುತ್ತಿದ್ದು ಮಿಮ್ಸ್‌ ಆಸ್ಪತ್ರೆಯಲ್ಲಿರುವ ಎಲ್ಲಾ 30 ವಂಟಿಲೇಟರ್‌ಗಳು ಭರ್ತಿಯಾಗಿವೆ. ಜೊತೆಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲೂ 30 ವೆಂಟಿಲೇಟರ್‌ಗಳಿದ್ದು ಅಲ್ಲೂ ಖಾಲಿ ಇಲ್ಲದಾಗಿದೆ.

ಮುಂದಿನ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕು ಆಸ್ಪತ್ರೆಯಲ್ಲಿರುವ ತಲಾ 3 ವೆಂಟಿಲೇಟರ್‌ಗಳನ್ನು ಬಳಕೆ ಮಾಡುವಂತೆ ಅಲ್ಲಿಯ ವೈದ್ಯರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯಂತೆ ತಾಲ್ಲೂಕು ಆಸ್ಪತ್ರೆಗಳಲ್ಲೂ ಐಸಿಯು, ವೆಂಟಿಲೇಟರ್‌ ಬಳಕೆ ಮಾಡಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.