ADVERTISEMENT

ಮಂಡ್ಯ | ಜನ ಭ್ರಷ್ಟರಲ್ಲ, ರಾಜಕಾರಣಿಗಳೇ ಭ್ರಷ್ಟರನ್ನಾಗಿಸಿದ್ದು: ಶಾಸಕ ಮಹೇಶ್

‘ನಮ್ಮ ಗ್ರಾಮ ನಮ್ಮ ಹಕ್ಕು’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:18 IST
Last Updated 18 ಜನವರಿ 2021, 1:18 IST
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ‘ನಮ್ಮ ಗ್ರಾಮ ನಮ್ಮ ಹಕ್ಕು’ ಹೆಸರಿನಡಿ ನಡೆದ ಕಾರ್ಯಾಗಾರದಲ್ಲಿ ಗಣ್ಯರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ‘ನಮ್ಮ ಗ್ರಾಮ ನಮ್ಮ ಹಕ್ಕು’ ಹೆಸರಿನಡಿ ನಡೆದ ಕಾರ್ಯಾಗಾರದಲ್ಲಿ ಗಣ್ಯರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಪಾಂಡವಪುರ: ‘ಕಳೆದ ವಿ‌ಧಾನಸಭೆ ಚುನಾವಣೆಯಲ್ಲಿ ಮನಸ್ಸಿಲ್ಲದ ಮನಸ್ಸಿನಲ್ಲಿ ಮೇಲುಕೋಟೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಬರಬೇಕಾಯಿತು’ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಹೇಳಿದರು.

ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ಮಕ್ಕಳ ಸಾಹಿತ್ಯ ಪರಿಷತ್, ತೇಜಸ್ವಿ ಅಭಿಮಾನಿಗಳ ಬಳಗ, ತ್ರಿ ಸೃಜನ ವೇದಿಕೆ ಆಯೋಜಿಸಿದ್ದ ‘ನಮ್ಮ ಗ್ರಾಮ ನಮ್ಮ ಹಕ್ಕು’ ಹೆಸರಿನಡಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಜೆಡಿಎಸ್‌– ಬಿಎಸ್‌ಪಿಯೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಕಾರಣದಿಂದ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಪಾಂಡವಪುರದಲ್ಲಿ ನಡೆದಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೆ. ಹೋರಾಟದ ಹಿನ್ನೆಲೆಯಿಂದ ಬಂದಿದ್ದವನಾಗಿದ್ದರಿಂದ ಈ ಕ್ಷೇತ್ರದಲ್ಲಿ ರೈತ ಸಂಘದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರಬೇಕಾಗಿದ್ದವನು, ಜೆಡಿಎಸ್ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರಬೇಕಾಯಿತು’ ಎಂದರು.

ADVERTISEMENT

‘ವಾಸ್ತವವಾಗಿ ಜನರು ಭ್ರಷ್ಟರಲ್ಲ. ಆದರೆ, ರಾಜಕಾರಣಿಗಳಾದ ನಾವು ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಚುನಾವಣೆಯಲ್ಲಿ ಮತದಾರನಿಗೆ ಹಣ ನೀಡಿ ಚುನಾವಣೆಯನ್ನೇ ಭ್ರಷ್ಟಗೊ ಳಿಸಲಾಗಿದೆ. ಜಾತಿ, ಹಣದ ಹೆಸರಿನಲ್ಲಿ ಚುನಾವಣೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮತದಾರರನ್ನು ಭ್ರಷ್ಟರನ್ನಾಗಿ ಮಾಡಿರುವುದರಿಂದ ಚುನಾವಣೆ ಯಿಂದ ಚುನಾವಣೆಗೆ ಅಭ್ಯರ್ಥಿಯ ಚುನಾವಣೆ ವೆಚ್ಚ ದುಬಾರಿಯಾಗುತ್ತಿದೆ. ಇದರಿಂದಲೇ ಭ್ರಷ್ಟಾಚಾರ ವಿಸ್ತಾರ ಗೊಳ್ಳುತ್ತಾ ಸಾಗಿದ್ದು, ಸಹಜ ಎಂಬಂತಾ ಗಿದೆ. ಇದನ್ನು ತಡೆಯದಿದ್ದರೆ ಪ್ರಜಾ ಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದರು.

ರಾಜಕಾರಣದಲ್ಲಿ ರಾಜಿ ಅನಿವಾರ್ಯ: ರಾಜಕಾರಣ ಮಾಡಬೇಕೆಂದರೆ ನಾವು ವ್ಯವಸ್ಥೆಯೊಡನೆ ಒಂದಿಷ್ಟು ರಾಜಿ ಮಾಡಿಕೊಳ್ಳಬೇಕಿದೆ. ಜನರ ಭಾವನೆಗಳಿಗೆ ಸ್ಪಂದಿಸಬೇಕಿದೆ. ನಮ್ಮ ಮನಸ್ಸಿಗೆ ಒಪ್ಪಲಿ ಬಿಡಲಿ ರಾಜಕಾರಣಕ್ಕಾಗಿ ಹೊಂದಿಕೊಂಡು ಹೋಗಬೇಕಿದೆ ಎಂದರು.

ಯುವಕರಿಂದ ಸಾಧ್ಯ: ಪ್ರತಿ ಕ್ಷೇತ್ರದಲ್ಲಿರುವ ವಿದ್ಯಾವಂತ ಯವ ಸಮುದಾಯ ಇಂಥ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಜಾತಿ–ಹಣ ಮುಕ್ತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರಬೇಕಿದೆ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಕನಿಷ್ಠ ಶೇ 20ರಷ್ಟು ಯುವಕ–ಯುವತಿಯವರು ಬದ್ಧತೆಯಿಂದ ಕೆಲಸ ಮಾಡಿದರ ಮಾತ್ರ ಚುನಾವಣೆ ಭ್ರಷ್ಟಾಚಾರ ತಡೆಯಬಹುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಅರಳಕುಪ್ಪೆಯ ಎ.ಆರ್.ರೂಪಾ, ಹರವು ಗ್ರಾ.ಪಂ.ನ ವೈ.ಎಚ್.ಮಂಜು ನಾಥ ಅಭಿಪ್ರಾಯ ಹಂಚಿಕೊಂಡರು.

ನಾಲ್ಕು ಬಾರಿ ಆಯ್ಕೆಯಾಗಿರುವ ಬಾಬುರಾಯನಕೊಪ್ಪಲಿನ ಬಿ.ಎಂ.ಶ್ರೀನಿವಾಸ್ ಕಾರ್ಯಕ್ರಮ ಉದ್ಫಾಟಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಹಿರಿಯ ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಎಚ್.ಆರ್.ಧನ್ಯಕುಮಾರ್, ತೇಜಸ್ವಿ ಅಭಿಮಾನಿಗಳ ಬಳಗ ಮತ್ತು ತ್ರಿ ಸೃಜನ ವೇದಿಕೆಯ ಡಾ.ಅಭಿನಯ್, ಅಮಿತ್‌, ಗುರು ಕ್ಯಾತನಹಳ್ಳಿ, ರವಿಕುಮಾರ್, ಪ್ರಸನ್ನ, ಹರೀಶ್, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.