
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.
‘ಆದಿರಂಗ, ಮಧ್ಯರಂಗ, ಅಂತ್ಯರಂಗನ ದರ್ಶನ ಮಾಡಿದರೆ ಪುಣ್ಯ ಬರುತ್ತದೆ’ ಎಂಬ ಜೋತಿಷಿಗಳ ಹೇಳಿಕೆ ಕಾರಣದಿಂದ ರಾಜ್ಯ, ಹೊರ ರಾಜ್ಯಗಳ ಸಹಸ್ರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು.
ಮುಂಜಾನೆ 4ರ ಸುಮಾರಿಗೇ ಹೊತ್ತಿಗೇ ದೇವಾಲಯದ ಮುಂದೆ ಸಾಲುಗಟ್ಟಿ ನಿಂತಿದ್ದರು. ದೇಗುಲದ ಮುಖ್ಯ ದ್ವಾರದಿಂದ ನ್ಯಾಯಾಲಯದ ವೃತ್ತದವರೆಗೂ ಭಕ್ತರ ಸಾಲು ಕಂಡು ಬಂತು. ನೂಕು ನುಗ್ಗಲು ಉಂಟಾದ ಕಾರಣ ದೇವಾಲಯ ಪ್ರವೇಶಿಸುವ ಸಾಲಿನಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ನೆಲಕ್ಕುರುಳಿದವು. ಮಹಿಳಾ ಭಕ್ತರೊಬ್ಬರ ಕಾಲಿನ ಮೇಲೆ ಕಬ್ಬಿಣದ ಬ್ಯಾರಿಕೇಡ್ ಬಿದ್ದು ಚೀರಾಡಿದರು.
ಇತ್ತ ಪ್ರವೇಶ ದ್ವಾರದ ಮೂಲಕ ದೇವಾಲಯ ಪ್ರವೇಶಿಸಲು ಕೆಲವರು ಹರಸಾಹಸಪಟ್ಟರು. ಕೆಲವರು ಅಧಿಕಾರಿಗಳು, ಶಾಸಕರು, ಸಚಿವರಿಂದ ಪತ್ರವನ್ನೂ ತಂದಿದ್ದರು. ಅಂಥವರು ನೇರ ದರ್ಶನ ಪಡೆಯಲು ಒಳಗೆ ಬಿಡುವಂತೆ ಪೊಲೀಸರನ್ನು ಕೋರುತ್ತಿದ್ದುದು ಕಂಡುಬಂದಿತು. ಆರಂಭದಲ್ಲಿ ಕೆಲ ಪ್ರಭಾವಿಗಳನ್ನು ಪೊಲೀಸರು ಒಳಗೆ ಕಳುಹಿಸಿಕೊಟ್ಟರು. ಸರದಿ ಸಾಲಿನಲ್ಲಿ ನಿಂತಿದ್ದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ವಾಗ್ವಾದ ನಡೆಯಿತು. ನಂತರ ಮುಖ್ಯದ್ವಾರದ ಬಳಿ ಮೂರು ಸಾಲುಗಳ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಬೆಳಿಗ್ಗೆ 9 ಗಂಟೆವರೆಗೂ ದೇವಾಲಯದ ಮುಂದೆ ಜನ ಜಾತ್ರೆಯೇ ಇತ್ತು. ದೇವಾಲಯದ ಆವರಣ ಮತ್ತು ನ್ಯಾಯಾಲಯ ಸಂಪರ್ಕ ರಸ್ತೆಯಲ್ಲಿ ನೂರಾರು ವಾಹನಗಳು ನಿಂತಿದ್ದವು.
‘ರಾಜ್ಯ, ಹೊರ ರಾಜ್ಯಗಳಿಂದ ಏಕ ಕಾಲಕ್ಕೆ 8ರಿಂದ 10ಸಾವಿರ ಭಕ್ತರು ಶನಿವಾರ ಮುಂಜಾನೆ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಇಷ್ಟು ಜನರನ್ನು ನಿರೀಕ್ಷಿಸಿರಲಿಲ್ಲ. ನೂಕಾಟದಲ್ಲಿ ಒಂದಿಬ್ಬರು ಪೊಲೀಸರಿಗೂ ತರಚಿದ ಗಾಯಗಳಾಗಿವೆ. ಭಾನುವಾರವೂ ರಜೆ ಇರುವುದರಿಂದ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಹಾಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು’ ಎಂದು ಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಬಿ.ಜಿ. ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.