ADVERTISEMENT

ಪಿಎಚ್‌ಸಿಗಳಲ್ಲೂ ಕೋವಿಡ್‌ ಕೇರ್‌ ಕೇಂದ್ರ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪಿಪಿಇ ಕಿಟ್‌ ಧರಿಸಿ ರೋಗಿಗಳ ಆರೋಗ್ಯ ವಿಚಾರಿಸಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:40 IST
Last Updated 20 ಮೇ 2021, 13:40 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು   

ಮಂಡ್ಯ: ‘ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಗುರುವಾರ ಮಿಮ್ಸ್‌ ಆಸ್ಪತ್ರೆಗೆ ಭೇಟಿ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಸೋಂಕು ಪತ್ತೆಯಾದ ನಂತರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ ಇಲ್ಲಿಯವರೆಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಮನೆಯಲ್ಲಿ ಉಳಿಯದೇ ಹೊರಗೆ ಓಡಾಡುತ್ತಿರುವ ದೂರುಗಳು ಬರುತ್ತಿವೆ. ಹೀಗಾಗಿ ಇನ್ನುಮುಂದೆ ಸೋಂಕು ಪತ್ತೆಯಾದ ರೋಗಿಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು’ ಎಂದರು.

ADVERTISEMENT

‘ರೋಗಲಕ್ಷಣ ತೀವ್ರವಾದರೆ ಮಾತ್ರ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಇಲ್ಲದಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಸೋಂಕಿತರನ್ನು ಆರೈಕೆ ಮಾಡಲಾಗುವುದು. ಅಲ್ಲಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಮಂಡ್ಯ ಜಿಲ್ಲೆಗೆ ಹೆಚ್ಚಿನ ಆಮ್ಲಜನಕ ಪೂರೈಸುವ ಬೇಡಿಕೆ ಇದೆ. ಶೀಘ್ರದಲ್ಲೇ ಹೆಚ್ಚಿನ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಉಳಿದಿರುವ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗುರಿಗಿಂತ ಶೇ 18ರಷ್ಟು ಹೆಚ್ಚಿನ ಕೋವಿಡ್‌ ಪರೀಕ್ಷೆ ನಡೆಯುತ್ತಿದೆ. ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯತ್ತಿರುವ ರೋಗಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಮನೆಮನೆಗೂ ತೆರಳಿ ಸಂಪರ್ಕಿತರನ್ನು ಪತ್ತೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ’ ಎಂದರು.

‘45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ ಲಸಿಕೆಯ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣ ಮಾಡಲು ಲಸಿಕೆಯೊಂದೇ ಪರ್ಯಾಯ ಮಾರ್ಗವಾಗಿದೆ. ದೇಶದಾದ್ಯಂತ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ವರ್ಷದ ಕೊನೆಯಲ್ಲಿ ಎಲ್ಲರಿಗೂ ಲಸಿಕೆ ದೊರಕಿಸಿ ಕೊಡಲಾಗುವುದು’ ಎಂದರು.

‘ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡಬೇಕು. ಮನೆಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ಔಷಧಿ ಕಿಟ್ ವಿತರಣೆ ಮಾಡಬೇಕು. ಸೋಂಕಿತರು ಗುಣಮುಖರಾಗಲು ಆರೋಗ್ಯ ಇಲಾಖೆ ಎಲ್ಲಾ ಕ್ರಮ ಕೈಗೊಳ್ಳಬೇಕು. ಕೋವಿಡ್‌ ವರದಿ ನೆಗೆಟಿವ್‌ ಬಂದರೂ ರೋಗ ಲಕ್ಷಣ ಇರುವವರಿಗೆ ಜಿಲ್ಲಾಡಳಿತ ಉಚಿತವಾಗಿ ಸಿಟಿ ಸ್ಕ್ಯಾನ್‌ ಮಾಡಿಸಲು ಕ್ರಮ ವಹಿಸಬೇಕು’ ಎಂದರು.

ಮಿಮ್ಸ್ ನಿಂದ ತಾಲ್ಲೂಕಿನ ಎಲ್ಲಾ ಕಡೆ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ಸಹಕರಿಸಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗದಂತೆ ನೋಡಿಕೊಳ್ಳಬೆಕು. ಪ್ರಾಥಮಿಕ ಕೇಂದ್ರಗಳೂ ಕೋವಿಡ್‌ಗೆ ಚಿಕಿತ್ಸೆ ನೀಡುವ ಕೇಂದ್ರಗಳನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

ಡಾ.ಅಶ್ವತ್ಥನಾರಾಯಣ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ವಾರ್ಡ್‌ಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್ .ಪುಟ್ಟರಾಜು, ಕೆ.ಟಿ ಶ್ರೀಕಂಠೇಗೌಡ , ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಎಸ್ ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾ ಡಾ.ಎಸ್‌.ಅಶ್ವಿನಿ , ಜಿ.ಪಂ ಸಿಇಒ ದಿವ್ಯಾಪ್ರಭು, ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ, ಮಿಮ್ಸ್ ನಿರ್ದೇಶಕ ಡಾ.ಎಂ.ಆರ್‌.ಹರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

*****

ಕಪ್ಪು ಶಿಲೀಂದ್ರ: ವರದಿ ನೆಗೆಟಿವ್‌

‘ಕಪ್ಪು ಶಿಲೀಂದ್ರ ರೋಗ ಕೆಲವೆಡೆ ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ಧಾರೆ. ಮಂಡ್ಯದಲ್ಲಿ ಇಬ್ಬರಿಗೆ ರೋಗ ಲಕ್ಷಣ ಪತ್ತೆಯಾಗಿತ್ತು, ಆದರೆ ವರದಿ ನೆಗೆಟಿವ್‌ ಬಂದಿದೆ. ಮತ್ತೊಬ್ಬರಿಗೆ ಈಗ ಲಕ್ಷಣ ಕಂಡುಬಂದಿದ್ದು ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಕಪ್ಪು ಶಿಲೀಂದ್ರ ರೋಗಗಕ್ಕೆ ಔಷಧಿ ಕೊರತೆ ಇದ್ದು ಹೊರದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ. ಮುಂದೆ ನಮ್ಮ ದೇಶದಲ್ಲೇ ಔಷಧಿ ಉತ್ಪಾದಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.