ADVERTISEMENT

ಮೌಢ್ಯಕ್ಕೆ ಶರಣಾಗುತ್ತಿರುವ ರಾಜಕಾರಣಿಗಳು: ಪ್ರೊ.ಕಾಳೇಗೌಡ ನಾಗವಾರ ಅಭಿಮತ

‘ಸಿದ್ದಲಿಂಗಯ್ಯ ಬದುಕು– ಬರಹ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 13:09 IST
Last Updated 31 ಆಗಸ್ಟ್ 2021, 13:09 IST
‘ಡಾ.ಸಿದ್ದಲಿಂಗಯ್ಯನವರ ಬದುಕು ಮತ್ತು ಬರಹಗಳ ಸಾಂಸ್ಕೃತಿಕ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿದರು
‘ಡಾ.ಸಿದ್ದಲಿಂಗಯ್ಯನವರ ಬದುಕು ಮತ್ತು ಬರಹಗಳ ಸಾಂಸ್ಕೃತಿಕ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿದರು   

ಮಂಡ್ಯ: ‘ಈಗಿನ ರಾಜಕಾರಣಿಗಳು ಮೌಢ್ಯಕ್ಕೆ ಶರಣಾಗುವುದು ಸಾಮಾನ್ಯವಾಗುತ್ತಿದೆ. ದೇವಾಲಯಗಳ ಜೀರ್ಣೋದ್ಧಾರಕ್ಕೆ ನೀಡುವ ಆದ್ಯತೆಯನ್ನು ಕೆರೆ ಕಟ್ಟೆ, ಗ್ರಂಥಾಲಯ, ಶಾಲೆ ನಿರ್ಮಾಣಕ್ಕೆ ನೀಡುತ್ತಿಲ್ಲ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಕರ್ನಾಟಕ ಸಮಾಜವಾದಿ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದ ಗಾಂಧಿಭವನದಲ್ಲಿ ಮಂಗಳವಾರ ನಡೆದ ‘ಡಾ.ಸಿದ್ದಲಿಂಗಯ್ಯ ಅವರ ಬದುಕು– ಬರಹಗಳ ಸಾಂಸ್ಕೃತಿಕ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳ ಆದ್ಯತೆ ಬದಲಾಗಿದೆ. ಜನಕಲ್ಯಾಣ ಉದ್ದೇಶಗಳಿಗೆ ಮಹತ್ವ ನೀಡುವ ಬದಲು ಮೂಢನಂಬಿಕೆ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಇಂತಹ ನಡವಳಿಕೆಯನ್ನು ಡಾ.ಸಿದ್ದಲಿಂಗಯ್ಯ ಅವರು ಖಂಡಿಸುತ್ತಿದ್ದರು. ಮೇಲ್ಮನೆ ಸದಸ್ಯರಾಗಿದ್ದಾಗ ತಾವು ನಂಬಿಕೊಂಡು ಬಂದ ವಿಚಾರಗಳನ್ನು ಗಟ್ಟಿಯಾಗಿ ಮಂಡಿಸುತ್ತಿದ್ದರು’ ಎಂದರು.

ADVERTISEMENT

‘ಬೂಸ ಚಳಿವಳಿಯಲ್ಲಿ ಬಸವಲಿಂಗಪ್ಪ ಅವರ ಪರವಾಗಿ ಸಿದ್ದಲಿಂಗಯ್ಯ ನಿಂತಿದ್ದರು. ಎಲ್ಲಾ ಸಾಹಿತ್ಯವನ್ನು ಅವರು ಬೂಸ ಎಂದಿರಲಿಲ್ಲ. ಸುಳ್ಳಾಗಿರುವುದು, ಟೊಳ್ಳಾಗಿರುವುದನ್ನು ಬೂಸ ಎಂದಿದ್ದರು. ಅಕ್ಕ ಮಹದೇವಿ ಕೂಡ ಟೊಳ್ಳು ಸಾಹಿತ್ಯವನ್ನು ತೌಡು ಎಂದು ಕರೆದಿದ್ದರು. ಸ್ವತ್ವವಿಲ್ಲದ ಸಾಹಿತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕುವೆಂಪು ಅವರೂ ಹೇಳಿದ್ದರು’ ಎಂದರು.

‘ಸಿದ್ದಲಿಂಗಯ್ಯ ಅವರಿಗೆ ಸಣ್ಣವರಿದ್ದಾಗಲೇ ಹೋರಾಟ ಮನೋಭಾವ ರೂಢಿಸಿಕೊಂಡಿದ್ದರು. ಅಂಬೇಡ್ಕರ್, ಬುದ್ಧರ ಆದರ್ಶಗಳು ಅವರ ಜೊತೆಗಿದ್ದವು. ಶೋಷಿತರು, ಸಮಾಜದಿಂದ ತುಳಿತಕ್ಕೊಳಗಾದವರು, ದೌರ್ಜನ್ಯಕ್ಕೆ ತುತ್ತಾದ ಜನರ ನೋವು-ಸಂಕಟಗಳನ್ನು ತೀರಾ ಹತ್ತಿರದಿಂದ ಕಂಡಿದ್ದರು. ಅವರ ಅಳಲು, ನೋವು, ದುಃಖಗಳಿಗೆ ಕಾವ್ಯದ ರೂಪ ಕೊಟ್ಟು ದಮನಿತರ ಪರವಾಗಿ ನಿಂತು ಬಂಡಾಯ ಸಾಹಿತ್ಯದ ರೂವಾರಿಯಾದರು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ಬಹುಮುಖ ವ್ಯಕ್ತಿತ್ವ ಹೊಂದಿದ್ದ ಸಿದ್ದಲಿಂಗಯ್ಯ ಅವರು ಸಾಮಾನ್ಯರ ಸಿಟ್ಟಿಗೆ ಕಾವ್ಯ ರೂಪ ಕೊಟ್ಟಿದ್ದರು. ಆಡು ಮಾತುಗಳಲ್ಲಿದ್ದ ಅವರ ಸಾಹಿತ್ಯ ಬಂಡಾಯಕ್ಕೆ ಹೊಸ ರೂಪ ನೀಡಿತು. ನೋವಿನ ದನಿಯನ್ನು ಅತ್ಯಂತ ಗಟ್ಟಿಯಾಗಿ ಕಾವ್ಯದಲ್ಲಿ ಹೊರಹೊಮ್ಮಿಸಿದ್ದರು. ಹೊಲೆಯ ಮಾದಿಗರ ಹಾಡಿನಿಂದ ಹೊಸ ಸಂಚಲನ ಸೃಷ್ಟಿಸಿದ್ದರು’ ಎಂದರು.

‘ತಮ್ಮ ಅದ್ಭುತ ಕಾವ್ಯಶಕ್ತಿ, ವಿಚಾರಧಾರೆಗಳಿಂದ ದಲಿತ ಸಂಘಟನೆಗಳಿಗೆ ಶಕ್ತಿ ತುಂಬಿದರು. ಆ ಮೂಲಕ ದಲಿತ ಚಳವಳಿಯ ನಾಯಕರಾದರು. ಸರಳಜೀವಿಯಾಗಿ, ಮೃದು ಭಾಷಿಯಾಗಿ, ಕಾವ್ಯಶಕ್ತಿಯ ಮೂಲಕ ಸಮಾಜವನ್ನು ಬಡಿದೆಚ್ಚರಿಸುತ್ತಿದ್ದ ಡಾ.ಸಿದ್ದಲಿಂಗಯ್ಯ ಅವರು ಶೋಷಿತರು, ದಮನಕ್ಕೊಳಗಾದ ಜನರ ಪರವಾಗಿ ನಿಂತು ಅವರ ನೋವುಗಳಿಗೆ ಮಿಡಿಯುತ್ತಿದ್ದರು’ ಎಂದರು.

ಚಿಂತಕ ಡಿ.ಹೊಸಳ್ಳಿ ಶಿವು ಮಾತನಾಡಿ ‘ಕವಿ ಸಿದ್ಧಲಿಂಗಯ್ಯ ಅವರು ಒಂದು ಸಮುದಾಯದ ಆತ್ಮಸಾಕ್ಷಿಯಷ್ಟೇ ಆಗಿರಲಿಲ್ಲ, ದಲಿತರ ಧ್ವನಿಯಾಗಿದ್ದರು, ಬಂಡಾಯದ ದನಿಯಾಗಿದ್ದರು. ಕಾವ್ಯಕ್ಕೆ ಕಣ್ಣಾಗಿ, ಸಮಾಜದ ಚಿಕಿತ್ಸಕರಾಗಿದ್ದರು. ಊರು ಕೇರಿಯ ಮಾರ್ದನಿಯಾಗಿದ್ದ ಸಿದ್ದಲಿಂಗಯ್ಯ ಈ ನಾಡ ಹೃದಯದ ಮಿಡಿತವೂ ಆಗಿದ್ದರು’ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್.ಚಂದ್ರಶೇಖರ್, ವಕೀಲ ಗಂಗಾವತಿ, ಕೆನರಾಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಚ್.ಕೆ.ಚಂದ್ರಹಾಸ್, ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಗಲ ಎಂ ಯೋಗೀಶ್‌, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಹುರುಗಲವಾಡಿ ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.