ಮಂಡ್ಯ: ‘ಪ್ರಸ್ತುತ ಜೀವನಕ್ಕೆ ಋಣಾತ್ಮಕ ವಿಷಯಗಳ ಚಿಂತನೆಯಿಂದ ರಕ್ಷಣೆ ಬೇಕಿದ್ದು, ಪರಮಾತ್ಮನ ಸಂಪರ್ಕದಿಂದ ಋಣಾತ್ಮಕ ಚಿಂತನೆಗಳಿಂದ ರಕ್ಷಣೆ ದೊರೆಯುತ್ತದೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯ ಶಾರದಾ ತಿಳಿಸಿದರು.
ರಕ್ಷಾ ಬಂಧನ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಕರ್ತರಿಗೆ ರಾಖಿ ಕಟ್ಟುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ಷಾ ಬಂಧನ ಆಚರಣೆಯು ರಕ್ಷಣೆಯ ಸಂಕೇತವಾಗಿದ್ದು, ದೇಹ ಮತ್ತು ಆತ್ಮ ಎರಡಕ್ಕೂ ರಕ್ಷಣೆ ಬೇಕಿದೆ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಿದ್ದು, ನಮ್ಮಲ್ಲಿನ ಋಣಾತ್ಮಕ ಚಿಂತನೆ ಬಿಡಲು ಆಂತರಿಕ ಶಕ್ತಿಯ ಕೊರತೆಯಿದೆ. ಪರಮಾತ್ಮನ ಸಂಪರ್ಕದಿಂದ ಆತ್ಮಶಕ್ತಿ ಹೆಚ್ಚಾಗಿ ಋಣಾತ್ಮಕ ಚಿಂತನೆ ದೂರವಾಗಲಿದೆ ಎಂದರು.
ಸಂಸ್ಥೆಯ ವಿಜಯಲಕ್ಷ್ಮಿ ಮಾತನಾಡಿ, ವಸುದೇವ ಕುಟುಂಬದವರಾದ ನಮಗೆ ಲೌಕಿಕ ಬಂಧನಗಳಿದ್ದು, ಬಂಧನಕ್ಕಿಂತ ಸಂಬಂಧ ಉತ್ತಮವಾಗಿರಬೇಕು. ಬಂಧನಗಳಿಂದ ಬಿಡುಗಡೆಗೆ ದೈವದ ಮೊರೆ ಹೋಗಬೇಕಿದೆ ಎಂದು ತಿಳಿಸಿದರು.
ರಕ್ಷಾಬಂಧನ ಪ್ರಯುಕ್ತ ರಾಖಿ ಕಟ್ಟಿ ಸಂಭ್ರಮಿಸುವುದು ಸಾಂಪ್ರದಾಯಿಕ ಆಚರಣೆಯಷ್ಟೆ. ಪವಿತ್ರ ಸಾಗರ ಭಗವಂತನ ಸಂಪರ್ಕದಿಂದ ಸಂಬಂಧದ ಆಚರಣೆಯಾಗಿ ರಕ್ಷಾ ಬಂಧನ ಆಚರಿಸೋಣ ಎಂದು ಕರೆ ನೀಡಿದರು.
ರಾಖಿ ಕಟ್ಟಿ ಉಡುಗೊರೆ ಪಡೆದ ಸಹೋದರಿಯರು
ರಕ್ಷಾ ಬಂಧನ ಹಬ್ಬದ ಅಂಗವಾಗಿ ಸಹೋದರಿಯರು ತಮ್ಮ ಪ್ರೀತಿಯ ಅಣ್ಣ–ತಮ್ಮಂದಿರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದರು. ಜೊತೆಗೆ ಅಣ್ಣಂದಿರಿಂದ ಪ್ರೀತಿಯ ಉಡುಗೊರೆಗಳನ್ನು ಪಡೆದು ಖುಷಿಪಟ್ಟರು. ಮಂಡ್ಯ ನಗರದ ಪೇಟೆ ಬೀದಿ ಆರ್.ಪಿ.ರಸ್ತೆ ವಿ.ವಿ.ರಸ್ತೆ ಮುಂತಾದ ಕಡೆ ಇದ್ದ ಅಂಗಡಿಗಳ ಮುಂಭಾಗ ರಾಖಿ ಖರೀದಿಸಲು ಯುವತಿಯರು ಸಾಲುಗಟ್ಟಿ ನಿಂತಿದ್ದರು. ರಕ್ಷಾ ಬಂಧನವು ಸಹೋದರ - ಸಹೋದರಿಯರ ನಡುವಿನ ಬಂಧವನ್ನು ಬಿಗಿಯಾಗಿಸುವ ಮಧುರ ಹಬ್ಬವಾಗಿದೆ. ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಪೂರ್ಣಿಮಾ ದಿನದಂದು ಆಚರಿಸುವುದರಿಂದ ಇದನ್ನು ‘ನೂಲು ಹುಣ್ಣಿಮೆ’ ಎಂದು ಕೂಡ ಆಚರಿಸಲಾಗುತ್ತದೆ. ‘ಈ ದಿನ ಸಹೋದರರಿಗೆ ಆರತಿಯನ್ನು ಮಾಡಿ ಹಣೆಗೆ ತಿಲಕವನ್ನು ಇಡಲಾಗುವುದು. ರಾಖಿಯನ್ನು ಕಟ್ಟಿರುವುದರ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಗೆ ಕೈಲಾದಷ್ಟು ಉಡುಗೊರೆಯನ್ನು ಹಣವನ್ನು ನೀಡುತ್ತಾರೆ. ಈ ಹಬ್ಬವು ಪ್ರೀತಿ ಜವಾಬ್ದಾರಿ ಗೌರವ ಮತ್ತು ಪರಸ್ಪರ ಕಾಳಜಿಯನ್ನು ಪ್ರತಿನಿಧಿಸುತ್ತದೆ’ ಎಂದು ಯುವತಿಯರಾದ ಸುಮಂಗಳಾ ಕಲ್ಪನಾ ಚಂದನಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.