ADVERTISEMENT

ಮಂಡ್ಯ: ಪಿಯು ವಿದ್ಯಾರ್ಥಿಗಳಿಗೆ 'ಪೋಸ್ಟ್‌ ಕಾರ್ಡ್‌' ಪಾಠ

ಸ್ಮಾರ್ಟ್‌ಫೋನ್‌ ಇಲ್ಲದ ವಿದ್ಯಾರ್ಥಿಗಳಿಗೆ ಅನುಕೂಲ; ಮಂಡ್ಯದ ಕಾಲೇಜಿನಲ್ಲಿ ಹೊಸ ಪ್ರಯೋಗ

ಎಂ.ಎನ್.ಯೋಗೇಶ್‌
Published 10 ಸೆಪ್ಟೆಂಬರ್ 2020, 20:30 IST
Last Updated 10 ಸೆಪ್ಟೆಂಬರ್ 2020, 20:30 IST
ಪೋಸ್ಟ್‌ ಕಾರ್ಡ್‌ಗಳಿಂದ ನೋಟ್ಸ್‌ ಮಾಡಿಕೊಂಡಿರುವ ಮೊತ್ತಹಳ್ಳಿ ಗ್ರಾಮದ ಮಂಜುನಾಥ್‌
ಪೋಸ್ಟ್‌ ಕಾರ್ಡ್‌ಗಳಿಂದ ನೋಟ್ಸ್‌ ಮಾಡಿಕೊಂಡಿರುವ ಮೊತ್ತಹಳ್ಳಿ ಗ್ರಾಮದ ಮಂಜುನಾಥ್‌   

ಮಂಡ್ಯ: ಕೋವಿಡ್‌ ಕಾಲದಲ್ಲಿ ಶಾಲಾ, ಕಾಲೇಜು ಮಕ್ಕಳಿಗೆ ಆನ್‌ಲೈನ್‌ ತರಗತಿ ಸಾಮಾನ್ಯವಾಗಿದೆ. ಆದರೆ ನಗರದ ಪಿಯು ಕಾಲೇಜೊಂದರ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪೋಸ್ಟ್‌ ಕಾರ್ಡ್‌ನಲ್ಲಿ ಪಾಠ ಬರೆದು ಕಳುಹಿಸುವ ಮೂಲಕ ಸಂಪರ್ಕ ಸಾಧಿಸಿದ್ದಾರೆ.

ಮರೀಗೌಡ ಬಡಾವಣೆಯಲ್ಲಿ ನೂತನವಾಗಿ ಆರಂಭವಾಗಿರುವ ಸಂತೋಷ್‌ ಪಿಯು ಕಾಲೇಜಿನಲ್ಲಿ, ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳೇ ದಾಖಲಾಗಿದ್ದಾರೆ. ಅವರಲ್ಲಿ ರೈತರು, ಕೃಷಿ ಕಾರ್ಮಿಕರು, ಎಳನೀರು ವ್ಯಾಪಾರಿಗಳು, ಗಾರೆ, ಗಾರ್ಮೆಂಟ್ಸ್‌ ಕಾರ್ಖಾನೆ ಕಾರ್ಮಿಕರ ಮಕ್ಕಳೇ ಹೆಚ್ಚು.

ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ ಫೋನ್‌ಗಳಿಲ್ಲ. ಕೆಲ ಮಕ್ಕಳು ದೂರದ ಊರುಗಳಲ್ಲಿದ್ದು, ಅಲ್ಲಿ ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಕೂಡ ದೊರೆಯುವುದಿಲ್ಲ. ಇಂತಹ ಮಕ್ಕಳಿಗೆ ಪೋಸ್ಟ್‌ ಕಾರ್ಡ್ ಪಾಠ ಅನುಕೂಲವಾಗಿದೆ.

ADVERTISEMENT

ಈ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ವಿಭಾಗ ಆರಂಭಗೊಂಡಿದ್ದು ಪ್ರಥಮ ಪಿಯುಸಿಗೆ 25 ಮಕ್ಕಳು ದಾಖಲಾಗಿದ್ದಾರೆ. ಎಲ್ಲರಿಗೂ ಆಗಸ್ಟ್‌ 1ರಿಂದ ನಿತ್ಯ ಪೋಸ್ಟ್‌ಕಾರ್ಡ್‌ನಲ್ಲಿ ಪಾಠ ಬರೆದು ಕಳುಹಿಸಲಾಗುತ್ತಿದೆ. ಎಲ್ಲರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದು ಮಾತೃಭಾಷೆಯಲ್ಲೇ ಪಾಠ ಕಳುಹಿಸಲಾಗುತ್ತಿದೆ. ಕಾರ್ಡ್‌ಗಳನ್ನೇ ನೋಟ್ಸ್‌ ಮಾದರಿಯಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ.

‘ನಮ್ಮದು ಹೊಸ ಕಾಲೇಜಾಗಿದ್ದು ಕೋವಿಡ್‌ ಸಂಕಷ್ಟ ಕಾಲದಲ್ಲಿ ದಾಖಲಾತಿ ಇರಲಿಲ್ಲ. ಮನೆಮನೆಗೆ ತೆರಳಿ ಬಡ ವಿದ್ಯಾರ್ಥಿಗಳನ್ನು ಕೆರೆದುಕೊಂಡು ಬಂದಿದ್ದೇವೆ. ಅವರು ಕೊಟ್ಟಷ್ಟು ಶುಲ್ಕ ಪಡೆದಿದ್ದೇವೆ. ಬಡವರಾದರೂ ಪ್ರತಿಭಾವಂತ ಮಕ್ಕಳು ಸಿಕ್ಕಿದ್ದಾರೆ. ಶೇ 90ರಷ್ಟು ಮಕ್ಕಳ ಬಳಿ ಸ್ಮಾರ್ಟ್‌ ಫೋನ್‌ಗಳಿಲ್ಲ, ಹೀಗಾಗಿ ಪ್ರತಿನಿತ್ಯ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ ಒಂದು ಪೋಸ್ಟ್‌ ಕಳುಹಿಸುತ್ತಿದ್ದೇವೆ. ಆಯಾ ವಿಷಯದ ಉಪನ್ಯಾಸಕರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ಪ್ರಾಚಾರ್ಯ ಬಿ.ಸಂತೋಷ್‌ ಹೇಳಿದರು.

ದಿನಕ್ಕೆ ₹ 12.50 ಖರ್ಚು: 25 ವಿದ್ಯಾರ್ಥಿಗಳಿಗೆ ತಲಾ 50 ಪೈಸೆಯ ಕಾರ್ಡ್‌ಗಳಲ್ಲಿ ಉಪನ್ಯಾಸಕರು ಪಾಠ ಕಳುಹಿಸುತ್ತಿದ್ದಾರೆ. ಪ್ರತಿದಿನ ₹ 12.50 ಖರ್ಚಾಗುತ್ತಿದೆ. ಮುಂದೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾದರೂ ಕಾಲೇಜು ಆರಂಭವಾಗುವವರೆಗೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ನಗರದ ಕೇಂದ್ರ ಅಂಚೆ ಕಚೇರಿಯಿಂದ ಕಾರ್ಡ್‌ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಡಿಜಿಟಲ್‌ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಸೇವೆಯ ಅರಿವನ್ನೂ ಮೂಡಿಸಿದಂತಾಗುತ್ತಿದೆ ಎಂದು ಉಪನ್ಯಾಸಕರು ಹೇಳುತ್ತಾರೆ.

‘ನಿತ್ಯ ಮರೆಯದೇ ಕಾರ್ಡ್‌ ತಂದುಕೊಡುವಂತೆ ಅಂಚೆಯಣ್ಣನಿಗೆ ಹೇಳಿದ್ದೇನೆ. ಜಮೀನು ಕೆಲಸಕ್ಕೆ ತೆರಳಿದಾಗಲೂ ಓದಿಕೊಳ್ಳಲು ಅನುಕೂಲವಾಗಿದೆ’ ಎಂದು ಕಬ್ಬು ಕಡಿಯುವ ಕೃಷಿ ಕಾರ್ಮಿಕನ ಪುತ್ರ, ಮೊತ್ತಹಳ್ಳಿ ಗ್ರಾಮದ ವಿದ್ಯಾರ್ಥಿ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.