ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಪ್ರೇಮಾಂಕುರ: ಅರಣ್ಯ ಪ್ರದೇಶದಲ್ಲಿ ಗೃಹಿಣಿ ಕೊಲೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:04 IST
Last Updated 25 ಜೂನ್ 2025, 16:04 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಕೆ.ಆರ್.ಪೇಟೆ: ಇನ್‌ಸ್ಟಾಗ್ರಾಂನಲ್ಲಿ ಏರ್ಪಟ್ಟ ಪರಿಚಯ ಪ್ರೇಮಕ್ಕೆ ತಿರುಗಿ, ಗೃಹಿಣಿಯ ಕೊಲೆಯಲ್ಲಿ ಕೊನೆಗೊಂಡ ಘಟನೆ ತಾಲ್ಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಕರೋಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಹಾಸನ ಮೂಲದ ಪ್ರೀತಿ (36) ಕೊಲೆಯಾದವರು. ಕರೋಟಿ ಗ್ರಾಮದ ಆರೋಪಿ ಪುನೀತ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಇಬ್ಬರೂ ಎರಡು ದಿನಗಳಿಂದ ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದರು. ನಂತರ ಕೆ.ಆರ್.ಪೇಟೆಯ ಕತ್ತರ ಘಟ್ಟ ಗ್ರಾಮ ಸಮೀಪದ ಅರಣ್ಯ ಪ್ರದೇಶಕ್ಕೆ ಬಂದ ವೇಳೆ ಜಗಳವಾಗಿತ್ತು. ಆಕೆಯನ್ನು ಕೊಂದ ನಂತರ ಮೃತದೇಹವನ್ನು ಕರೋಟಿಯ ಜಮೀನಿಗೆ ತಂದಿಟ್ಟು ಆರೋಪಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಗೆ ಇಬ್ಬರು ಮಕ್ಕಳಿದ್ದು, ಪತ್ನಿ ಕಾಣೆಯಾದ ಬಗ್ಗೆ ಪತಿ ಹಾಸನ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯ ಸುಳಿವನ್ನು ಪತ್ತೆ ಹಚ್ಚಲಾಯಿತು. ಮಹಿಳೆಯ ಫೋನನ್ನು ಆರೋಪಿ ತನ್ನ ಬಳಿಯೇ ಇಟ್ಟುಕೊಂಡಿದ್ದರಿಂದ ಸಿಕ್ಕಿಬಿದ್ದ’ ಎಂದು ಕಿಕ್ಕೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ರೇವತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.