ADVERTISEMENT

ಅಧ್ಯಕ್ಷರ ಪರ ಸಿಇಒ ಕೆಲಸ: ಜೆಡಿಎಸ್‌ ಪ್ರತಿಭಟನೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸರ್ವಾಧಿಕಾರಿ ಧೋರಣೆ ಆರೋ‍ಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 14:59 IST
Last Updated 16 ಅಕ್ಟೋಬರ್ 2020, 14:59 IST
ಜಿ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಜೆಡಿಎಸ್‌ ಸದಸ್ಯರ ಜೊತೆ ಸಿಇಒ ಜುಲ್ಫಿಕರ್‌ ಉಲ್ಲಾ ಮಾತುಕತೆ ನಡೆಸಿದರು
ಜಿ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಜೆಡಿಎಸ್‌ ಸದಸ್ಯರ ಜೊತೆ ಸಿಇಒ ಜುಲ್ಫಿಕರ್‌ ಉಲ್ಲಾ ಮಾತುಕತೆ ನಡೆಸಿದರು   

ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್‌ ಉಲ್ಲಾ ಅವರು ಅಧ್ಯಕ್ಷೆ ನಾಗರತ್ನಾ ಸ್ವಾಮಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯರು ಶುಕ್ರವಾರ ಜಿ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಳೆದೊಂದು ವರ್ಷದಿಂದ 6 ಸಾಮಾನ್ಯ ಸಭೆಗಳನ್ನು ಕೋರಂ ಕೊರತೆಯ ಕಾರಣದಿಂದ ಮುಂದೂಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸೂಚನೆಯಂತೆ ಎಲ್ಲ ಇಲಾಖೆಗಳಿಂದ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆಗಳಿಗೆ ಸರ್ಕಾರವೇ ಅನುಮೋದನೆ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಸಿಇಒ ಅಧ್ಯಕ್ಷರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸದಸ್ಯರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾಗಿರುವ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ಕಾಯ್ದೆಯ ತಿದ್ದುಪಡಿ ಅನ್ವಯ ಅಧ್ಯಕ್ಷರ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಾ, ತಮಗೆ ಬೇಕಾದ ಸದಸ್ಯರಿಗೆ ಹೆಚ್ಚು ಅನುದಾನ ನೀಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಒತ್ತು ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಅವಧಿ ಮುಗಿದಿರುವ ಕಾರಣ ಹಣಕಾಸು ಸ್ಥಾಯಿ ಸಮಿತಿ ಸಭೆಗೆ ನಾವು ಹಾಜರಾಗಿಲ್ಲ. ಅಧಿಕಾರಕ್ಕೆ ಅಂಟಿಕೊಂಡಿರುವ ನಾಗರತ್ನಸ್ವಾಮಿ ಅವರು, ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸುತ್ತಿದ್ದಾರೆ. ಅಧಿಕಾರಕ್ಕೆ ಅಂಟಿ ಕುಳಿತಿದ್ದಾರೆ. ಜಿ.ಪಂ ಸಿಇಒ ಕೂಡ ಶಾಮೀಲಾಗಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸಿಇಒ ತಾವು ಬರೆದ ಪತ್ರ ವಾಪಸ್‌ ಪಡೆದು ಮುಂದೂಡಿದ ಸದಸ್ಯರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸುವವರೆಗೂ ಅಧ್ಯಕ್ಷರು ಯಾವುದೇ ಅಧಿಕಾರ ಚಲಾಯಿಸಬಾರದು. ಸಭೆ ನಡೆಸಿ ಜಿಲ್ಲೆಗೆ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ಪಡೆಯಬೇಕು. ಕೂಡಲೇ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ಬಿ.ಎಲ್.ದೇವರಾಜು, ಎಚ್.ಟಿ.ಮಂಜು, ಸಿ.ಅಶೋಕ್, ಪ್ರೇಮಕುಮಾರಿ, ಸುಧಾ ಜಯಶಂಕರ್, ಡಿ.ಕೆ.ಶಿವಪ್ರಕಾಶ್, ರಾಮದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.