ಮಂಡ್ಯ: ಮೈಷುಗರ್ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಸ್ತಾಪವನ್ನು ತಕ್ಷಣ ಕೈಬಿಡಬೇಕೆಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ.
‘ಇತಿಹಾಸ ಪ್ರಸಿದ್ಧ ಮೈಸೂರು ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದ ಅಷ್ಟೇ ಪ್ರಸಿದ್ಧವಾದ ಮೈಷುಗರ್ ಶಾಲೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಮೈಷುಗರ್ ಆಡಳಿತ ಮಂಡಳಿಯ ಪ್ರಸ್ತಾಪ ಖಂಡನೀಯ. ಮಂಡ್ಯ ನಗರದ ಅಸ್ಮಿತೆ ಮತ್ತು ಹತ್ತಾರು ಸಾವಿರ ಜನರಿಗೆ ಶಿಕ್ಷಣ ನೀಡಿರುವ ಮೈಷುಗರ್ ಶಾಲೆಯನ್ನು ಪುನರುಜ್ಜೀವನಗೊಳಿಸಲು ಆಡಳಿತ ಮಂಡಳಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಶಿಕ್ಷಕರೇ ನೇಮಕಾತಿ ಮಾಡಬೇಕು, ಜೊತೆಗೆ ಯಾವುದೇ ರೀತಿಯ ಖಾಸಗೀಕರಣದ ಮಾತು ಹೇಳಬಾರದು’ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
‘ನಗರದ ಮೈಸೂರು ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಹಾಗೂ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮೈಷುಗರ್ ಶಾಲೆಯ ಅಸ್ತಿ ಮೇಲೆ ಕಣ್ಣಿಟ್ಟಿರುವ ಖಾಸಗಿ ವ್ಯಕ್ತಿಗಳು ಮತ್ತು ಅವರಿಗೆ ಸಿಗಬಹುದಾದ ಕಮಿಷನ್ ಮೇಲಿನ ಆಸೆಯಿಂದ ಆಡಳಿತ ಮಂಡಳಿಯ ಮುಖ್ಯಸ್ಥರ ಹೊಣಗೇಡಿತನ ಇಂತಹ ಪ್ರಸ್ತಾಪಗಳಿಗೆ ಕಾರಣವಾಗಿದೆ. ಇದು ಮುಂದವರಿದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.