ADVERTISEMENT

ಮಂಡ್ಯ: ಕಾವೇರಿ ಆರತಿಗೆ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:39 IST
Last Updated 17 ಮೇ 2025, 13:39 IST
ಕೆಆರ್‌ಎಸ್‌ನಲ್ಲಿ ಪ್ರಾರಂಭಿಸಲು ಹೊರಟಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು
ಕೆಆರ್‌ಎಸ್‌ನಲ್ಲಿ ಪ್ರಾರಂಭಿಸಲು ಹೊರಟಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು   

ಮಂಡ್ಯ: ‘ಕೆಆರ್‌ಎಸ್‌ನಲ್ಲಿ ಪ್ರಾರಂಭಿಸಲು ಹೊರಟಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಅನ್ನು ರದ್ದುಪಡಿಸಬೇಕು ಹಾಗೂ ಕಾವೇರಿ ಆರತಿ ಯೋಜನೆ ಕೈಬಿಟ್ಟು ಅದಕ್ಕೆ ಮೀಸಲಿಟ್ಟಿರುವ ₹ 92 ಕೋಟಿಯನ್ನು ಕೆಆರ್‌ಎಸ್‌ ಅಚ್ಚುಕಟ್ಟು ವಿತರಣಾ ನಾಲೆಗಳಿಗೆ ಆಧುನೀಕರಣಕ್ಕೆ ಬಳಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಜಮಾವಣೆಗೊಂಡು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿಪಡಿಸುವಾಗ ಶೇ 8.5ರಷ್ಟು ಇಳುವರಿ ಆಧಾರದ ಮೇಲೆ ದರ ನಿಗದಿಪಡಿಸಬೇಕು. ರಾಜ್ಯ ಸರ್ಕಾರವು ಟನ್‌ ಕಬ್ಬಿಗೆ ಕನಿಷ್ಠ ₹500 ಪ್ರೋತ್ಸಾಹಧನ ನೀಡಬೇಕು. ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತವಾಗಿ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಕಾಯಂ ಆಗಿ ಭತ್ತ ಹಾಗೂ ರಾಗಿ ಕೇಂದ್ರಗಳನ್ನು ತೆರೆದು ರೈತರಿಂದ ಮಿಲ್‌ ಪಾಯಿಂಟ್‌ನಲ್ಲಿ ಭತ್ತವನ್ನು ಖರೀದಿಸಬೇಕು. ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾಶಗಳಿಂದ ಹಾಲಿ ಬೆಳೆದು ನಿಂತಿರುವ ಮಾಡಬೇಕು. ಈಗಾಗಲೇ ಘೋಷಿಸಿರುವಂತೆ ₹150 ಕಬ್ಬಿನ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ರಂಗರಾಜನ್‌ ವರದಿಯಂತೆ ಪ್ರತಿವರ್ಷವೂ ಕಬ್ಬಿನ ಉಪ ಉತ್ಪನ್ನಗಳಲ್ಲಿ ಬರುವ ಲಾಭಾಂಶದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಶೇ 70ರಷ್ಟು ಲಾಭಾಂಶವನ್ನು ನೀಡುವಂತೆ ಸರ್ಕಾರವು ಆಯಾ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ ನಿಗದಿಪಡಿಸಿರುವ ₹ 25 ಸಾವಿರವನ್ನು ರೈತರಿಂದ ಜಮಾಪಡಿಸಿಕೊಂಡು ಉಳಿದ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಆಗ್ರಹ ಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌. ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್‌. ಲಿಂಗಪ್ಪಾಜಿ, ಕೋಶಾಧ್ಯಕ್ಷ ಎಸ್.ಕೆ. ರವಿಕುಮಾರ್, ರಾಜ್ಯ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ಮುಖಂಡರಾದ ದೇವರಾಜ್‌, ಶಿವರುದ್ರ, ವಿನೋದ್‌ಬಾಬು ತೂಬಿನಕೆರೆ, ಮಂಜು ಕೋಣನಹಳ್ಳಿ, ರಘುಗೌಡ ಮಳವಳ್ಳಿ, ವಿಜಯ್‌ಕುಮಾರ್‌, ಅಣ್ಣಯ್ಯ, ರುದ್ರೇಶ್‌, ಮಮತಾ, ರಾಣಿ, ಲೀಲಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.