ಮಂಡ್ಯ: ಮೈಷುಗರ್ ಪ್ರೌಢಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ(ಏಕೀಕರಣ)ದ ಕಾರ್ಯಕರ್ತರು ನಗರದ ಜೆ.ಸಿ.ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
15 ವರ್ಷಗಳ ಅವಧಿಗೆ ಪ್ರೌಢಶಾಲೆಯನ್ನು ಜಿಲ್ಲೆಯ ಪ್ರಭಾವಶಾಲಿ ರಾಜಕಾರಣಿಯೊಬ್ಬರ ವಿದ್ಯಾಸಂಸ್ಥೆಗೆ ಉಚಿತವಾಗಿ ಗುತ್ತಿಗೆ ನೀಡಲು ಮುಂದಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ‘ಮೈಷುಗರ್ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಜೊತೆಗೆ ರೈತರು ಕೂಡ ಪ್ರತಿ ಟನ್‌ಗೆ ನಾಲ್ಕು ರೂಪಾಯಿಗಳನ್ನು ನೀಡುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳ ಒಕ್ಕೂಟದಿಂದ ಇತ್ತೀಚೆಗೆ ₹40 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಇಡಲಾಗಿದೆ’ ಎಂದರು.
‘ಭಾರತ್ ಪೆಟ್ರೋಲಿಯಂನವರು ₹80 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿದ್ದಾರೆ. ಈ ರೀತಿ ಸುಸಜ್ಜಿತವಾಗಿದ್ದ ಶಾಲೆಯನ್ನು ಅನವಶ್ಯಕ ಕಾರಣಗಳನ್ನು ನೀಡುತ್ತಾ 15 ವರ್ಷಗಳ ಅವಧಿಗೆ ಉಚಿತವಾಗಿ ಗುತ್ತಿಗೆಯನ್ನು ಯಾರೂ ಒಪ್ಪುವುದಲ್ಲಿ ಹಾಗಾಗಿ ಯಾವುದೇ ಕಾರಣಕ್ಕೂ ನೀಡಬಾರದು’ ಎಂದು ಆಗ್ರಹಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಗಿರುವ ಉಸ್ತುವಾರಿ ಸಚಿವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷದಿಂದ ಮೈಷುಗರ್ ಖಾಸಗೀಕರಣವನ್ನು ವಿರೋಧಿಸಿ ಎತ್ತಿನ ಗಾಡಿ ಮೆರವಣಿಗೆ ಮಾಡಿದ್ದೆವು. ಇಂದು ಅದನ್ನು ಮರೆತು ತಮ್ಮ ಹಿಂದಿನ ಮಾತನ್ನೇ ಧಿಕ್ಕರಿಸಿದ್ದಾರೆ’ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ತುಳಸಿ, ವಡ್ಡರಹಳ್ಳಿಕೊಪ್ಪಲು ಚಂದ್ರಶೇಖರ್, ಮಲ್ಲಿಕಾರ್ಜುನ್, ಪ್ರಶಾಂತ್, ಲಕ್ಕಪ್ಪ, ಶಂಕರ್‌ನಗರ ಮಹೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.