ADVERTISEMENT

ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 4:49 IST
Last Updated 24 ಮೇ 2022, 4:49 IST
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಭೂ ಮಾಪನಾ (ಸರ್ವೆ) ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ರೈತರು ಮುಖಂಡ ಕೆ.ಎಸ್‌. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಸೋಮವಾರ ಕಚೇರಿ ಎದುರು ಧರಣಿ ನಡೆಸಿದರು
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಭೂ ಮಾಪನಾ (ಸರ್ವೆ) ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ರೈತರು ಮುಖಂಡ ಕೆ.ಎಸ್‌. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಸೋಮವಾರ ಕಚೇರಿ ಎದುರು ಧರಣಿ ನಡೆಸಿದರು   

ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ಭೂ ಮಾಪನಾ (ಸರ್ವೆ) ಇಲಾಖೆ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.

ಭೂ ಮಾಪನಾ ಇಲಾಖೆಯ ಕಚೇರಿ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಧರಣಿ ನಡೆಯಿತು. ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಅಧೀಕ್ಷಕರು ಹಾಗೂ ಸಿಬ್ಬಂದಿಯ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಆಗಮಿಸಿದ ಸರ್ವೆ ಇಲಾಖೆ ಅಧೀಕ್ಷಕ ಸಿದ್ದಯ್ಯ ಅವರ ವಿರುದ್ಧ ಹರಿಹಾಯ್ದರು. ಭೂ ಮಾಪನಾ ಇಲಾಖೆಯ ಸರ್ವೇಯರ್‌ಗಳು ಮತ್ತು ಸಿಬ್ಬಂದಿ ಸೋಮವಾರ ಸಾಮೂಹಿಕವಾಗಿ ಅನಧಿಕೃತ ಗೈರು ಹಾಜರಾಗಿರುವುದನ್ನು ಪ್ರಶ್ನಿಸಿದರು. ಇಲಾಖೆಯ ನೌಕರನ ವಿವಾಹಕ್ಕೆ ಪಾಂಡವಪುರಕ್ಕೆ ಹೋಗಿದ್ದಾರೆ ಎಂದು ಸಿದ್ದಯ್ಯ ಸಮಜಾಯಿಷಿ ನೀಡಿದರು. ರೈತರನ್ನು ಅಲೆದಾಡಿಸಬಾರದು. ಲಂಚಕ್ಕೆ ಪೀಡಿಸಿದರೆ ಸಹಿಸುವುದಿಲ್ಲ ಎಂದು ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ ಎಚ್ಚರಿಸಿದರು.

ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಅವರನ್ನು ಭೇಟಿ ಮಾಡಿದ ರೈತರು ಕೆಲಸದ ಸಮಯದಲ್ಲಿ ಸಾಮೂಹಿಕವಾಗಿ ಗೈರು ಹಾಜರಾಗಿರುವ ಸರ್ವೆ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ಆಸನ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎರಡನೇ ಮಹಡಿಯಲ್ಲಿರುವ ಉಪ ನೊಂದಣಾಧಿಕಾರಿ ಕಚೇರಿಗೆ ವೃದ್ಧರು, ಅಂಗವಿಕಲರು ಹತ್ತಿಳಿಯಲು ತೊಂದರೆಯಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಪಟ್ಟಣದಿಂದ ಕೆಆರ್‌ಎಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಸ್ಥಳೀಯರು ಮಾತ್ರವಲ್ಲದೆ ದೇಶ, ವಿದೇಶಗಳ ಪ್ರವಾಸಿಗರು ಬವಣೆಪಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣಿದ್ದೂ ಸುಮ್ಮನಿದ್ದಾರೆ. ಈ ರಸ್ತೆ ಅಭಿವೃದ್ಧಿ ಸಂಬಂಧ ಜಿಲ್ಲಾಡಳಿತ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ತಿಳಿಸಿದರು.

ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಿ.ಸಿ. ಕೃಷ್ಣೇಗೌಡ, ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌, ಹೊಸಹಳ್ಳಿ ಸ್ವಾಮಿ, ಮಹದೇವಪುರ ಕೃಷ್ಣ, ರವಿ, ಮರಳಾಗಾಲ ಶಂಕರ್‌, ಮಹದೇವು, ಫಿಲಿಪ್‌, ಹೊಸೂರು ಶಿವರಾಜು, ಪುರುಷೋತ್ತಮ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.