ಮಂಡ್ಯ: ಸಂಗೀತ ನಿರ್ದೇಶಕ ಹಂಸಲೇಖ ಅವರು ಆಡಿದ ಮಾತುಗಳನ್ನು ಬೆಂಬಲಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕೋಳಿ ಬಿರಿಯಾನಿ ತಿಂದು ಪ್ರತಿಭಟನೆ ನಡೆಸಿದರು.
ಹಂಸಲೇಖ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ಆರೋಪ ಹೊರಿಸಿ ದೂರು ದಾಖಲಿಸಿವೆ. ಅವರನ್ನು ನಿಂದಿಸಿ ಅಪಮಾನ ಮಾಡಲಾಗುತ್ತಿದೆ. ಅವರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಲಾಗುತ್ತಿದೆ. ಅವರಿಗೆ ಜೀವಭಯ ಹುಟ್ಟಿಸುವ ಫೋನ್ ಕರೆ ಮಾಡಲಾಗುತ್ತಿದೆ. ಸರ್ಕಾರ ಹಂಸಲೇಖ ಅವರಿಗೆ ರಕ್ಷಣೆ ನೀಡಬೇಕು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಂಸಲೇಖ ಅವರು ವ್ಯಕ್ತ ಪಡಿಸಿರುವ ಅಭಿಪ್ರಾಯಗಳು ಸಾಂವಿಧಾನಿಕವಾದ, ಪ್ರಗತಿಪರವಾದ, ಸಮಾನತೆ ಪರ ವಿಚಾರಗಳಾಗಿವೆ. ಅವರ ಮಾತಿನಲ್ಲಿ ನಿಂದಿಸುವ, ನೋಯಿಸುವ ಅಂಶಗಳು ಖಂಡಿತಾ ಇಲ್ಲ. ಪೇಜಾವರ ಶ್ರೀಗಳು ದಲಿತ ಕೇರಿಗಳಿಗೆ ನಡೆಸಿದ ಪಾದಯಾತ್ರೆಗಳಿಂದ ಅಸ್ಪೃಶ್ಯತೆ ನಾಶ ಮಾಡಲು ಸಾಧ್ಯವಾಗಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅದನ್ನೇ ತಪ್ಪಾಗಿ ಅರ್ಥೈಯಿಸಿಕೊಂಡು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಚಿಕನ್ ಬಿರಿಯಾನಿ ತಿಂದ ಮುಖಂಡರು, ಆಹಾರ ನಮ್ಮ ಹಕ್ಕು, ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು. ಪ್ರತಿಭಟನೆಯಲ್ಲಿ ಸಾಹಿತಿಗಳಾದ ಹುಲ್ಕೆರೆ ಮಹದೇವು, ಜಿ.ಟಿ.ವೀರಪ್ಪ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ವಕೀಲರಾದ ಜೆ.ರಾಮಯ್ಯ, ಬಿ.ವಿ.ವಿಶ್ವನಾಥ್, ಎಸ್.ಪೂರ್ಣಚಂದ್ರ, ಲಕ್ಷ್ಮಣ್ ಚೀರನಹಳ್ಳಿ, ನಾಗಣ್ಣ, ಸುಂಡಹಳ್ಳಿ ಮಂಜುನಾಥ್, ಹುರುಗಲವಾಡಿ ರಾಮಯ್ಯ, ನರಸಿಂಹಮೂರ್ತಿ, ಸಾತನೂರು ಜಯರಾಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.