ADVERTISEMENT

ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಲು ಒತ್ತಾಯ

ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಪ್ರತಿಭಟನೆ, ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 11:42 IST
Last Updated 1 ಆಗಸ್ಟ್ 2022, 11:42 IST
ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು
ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು   

ಮಂಡ್ಯ: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ, ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಏಳೂ ತಾಲ್ಲೂಕಿನಿಂದ ಬಂದಿದ್ದ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಮುಖಂಡರು ನಗರದ ಮಹಿಳಾ ಸರ್ಕಾರಿ ಕಾಲೇಜು ಬಳಿ ಜಮಾಯಿಸಿದರು. ನಂತರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸಮಾಜ ವಿರೋಧಿ ಚಟುವಟಿಕೆ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಸಮಾಜದ್ರೋಹಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಜನಾಂಗೀಯ ದ್ವೇಷ ಹರಡುವುದರಲ್ಲಿ ಈ ಸಂಘಟನೆಗಳು ನಿರತವಾಗಿವೆ ಎಂದು ಆರೋಪಿಸಿದರು.

ADVERTISEMENT

ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ಉಂಟು ಮಾಡುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗುತ್ತಿದೆ. ಬೇರೆ ಬೇರೆ ಹೆಸರಿನ ಪೇಜ್‌ಗಳ ಮೂಲಕ ಸಂದೇಶ ಹರಿಬಿಡುವುದು ಮತ್ತು ಬಹಿರಂಗವಾಗಿ ಕೋಮು ದ್ವೇಷ ಹರಡುವುದು ಮಾಡುತ್ತಿರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಜೊತೆಗೆ ಬಹಿರಂಗವಾಗಿ ಹಿಂದೂಪರ ಸಂಘಟನೆಗಳನ್ನು ನಾಶಪಡಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಕೋಮು ಪ್ರಚೋದಿತ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಟನಾಕಾರರು ಒತ್ತಾಯಿಸಿದರು.

ಅಕ್ರಮ ಗೋಸಾಗಾಣಿಕೆಗೆ ಕುಮ್ಮಕ್ಕು ನೀಡುವುದು, ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಟೀಕಿಸುವುದು ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಈ ಸಂಘಟನೆಗಳು ಸಕ್ರಯವಾಗಿರುವುದು ದುರಂತ. ಸರ್ಕಾರ ಇಲ್ಲಿಯವರೆಗೂ ಇಂಥವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ತಕ್ಷಣ ದೇಶದ ಹಿತದೃಷ್ಠಿಯಿಂದ ಇಂತಹ ಪಾತಕ ಸಂಘಟನೆಗಳನ್ನು ನಿಷೇಧಿಸಬೇಕು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮದ್ದೂರು, ನಾಗಮಂಗಲ, ಪಾಂಡವಪುರ, ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ, ಮಂಡ್ಯ ತಾಲ್ಲೂಕುಗಳಿಂದ ಬೈಕ್ ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಬಂದಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಂತರ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸಿ.ಪಿ.ಉಮೇಶ್‌, ಅಶೋಕ್‌ ಜಯರಾಂ, ಲಕ್ಷ್ಮಿ ಅಶ್ವಿನಿಗೌಡ, ಎಚ್‌.ಪಿ.ಮಹೇಶ್‌, ಪ.ನ.ಸುರೇಶ್‌, ಮದ್ದೂರು ಎಸ್‌.ಪಿ.ಸ್ವಾಮಿ, ಪಾಂಡವಪುರ ಇಂದ್ರೇಶ್, ಶಿವಣ್ಣ ಚಂದಗಾಲು, ಎಂ.ಸಿ.ವರದರಾಜ್‌, ಹಲಗೂರು ಕುಮಾರ್, ಹೊಸಹಳ್ಳಿ ಶಿವು, ಹರೀಶ್‌, ರವಿ, ಅನಿಲ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.