ADVERTISEMENT

ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲ: ಅಹೋರಾತ್ರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:57 IST
Last Updated 23 ಮೇ 2025, 12:57 IST
ಪಿಡಿಒ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಕೂಲಿಕಾರರು ಗುರುವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು
ಪಿಡಿಒ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಕೂಲಿಕಾರರು ಗುರುವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು   

ಹಲಗೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೋರಿ ತಿಂಗಳು ಕಳೆದರೂ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಲಿಂಗಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಕೂಲಿಕಾರರು ಗುರುವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

‘ಪಿಡಿಒ ವಿಜಯ್ ಕುಮಾರ್ ಒಂದು ಗುಂಪಿಗೆ ಎನ್.ಎಂ.ಆರ್ ತೆಗೆದು ಕೆಲಸ ನೀಡಿದ್ದು, ಮತ್ತೊಂದು ಗುಂಪಿಗೆ ಉದ್ದೇಶಪೂರ್ವಕವಾಗಿಯೇ ಎನ್.ಎಂ.ಆರ್. ತೆಗೆಯದೇ ದ್ರೋಹ ಎಸಗಿದ್ದಾರೆ. ಗುರುವಾರ ಮಧ್ಯಾಹ್ನದಿಂದ ಮನವಿ ಮಾಡಿದರೂ ಏಕವಚನದಲ್ಲಿ ಮಾತನಾಡುತ್ತಾರೆ. ಎನ್.ಎಂ.ಆರ್. ತೆಗೆದು ಕೊಡುವವರೆಗೂ ಸ್ಥಳದಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದು ಕುಳಿತರು.

‘ಪಿಡಿಒ ಸ್ಥಳೀಯವಾಗಿ ವಾಸ ಮಾಡಬೇಕೆಂಬ ನಿಯಮವಿದೆ. ಆದರೆ ಮಹಿಳೆಯರು ರಾತ್ರಿ ಪೂರ್ತಿ ಪಂಚಾಯತಿ ಕಚೇರಿಯಲ್ಲಿ ಕುಳಿತರೂ ಸೌಜನ್ಯಕ್ಕೂ ಮಾತನಾಡದೇ ದರ್ಪ ತೋರಿಸುತ್ತಿರುವ ವಿಜಯ್ ಕುಮಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಡ್ಯ ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರಶೇಖರ್ ಅವರು ಸಮಸ್ಯೆಗಳನ್ನು ಆಲಿಸಿದರು. ನಂತರ ಎನ್.ಎಂ.ಆರ್. ತೆಗೆಸಿ ಕೆಲಸಕ್ಕೆ ಕಳುಹಿಸಲು ಅನುವು ಮಾಡಿಕೊಟ್ಟರು.

‘ಏ.4ರಂದು ಕೂಲಿಕಾರರು ಕೆಲಸ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೂಲಿಕಾರರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಎನ್.ಎಂ.ಆರ್. ಜನರೇಟ್ ಮಾಡಿ ಕೆಲಸ ಕೊಡಲು ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ವಿಜಯ್ ಕುಮಾರ್ ಮತ್ತು ಎಂಜಿನಿಯರ್ ನಿರಂಜನ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಕೆಲಸಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕೆಲಸ ನೀಡಲು ಸಾಧ್ಯವಾಗದಿದ್ದರೆ ನಿರುದ್ಯೋಗ ಭತ್ಯೆ ಪಡೆಯುವ ಅವಕಾಶ ಕೂಲಿಕಾರರಿಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿ ಕೆಲಸ ನೀಡಲು ಸಾಧ್ಯವಾಗದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಸಹಾಯಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಚ್ಚರಿಸಿದರು.

ತಾಲ್ಲೂಕು ಪಂಚಾಯತಿ ಇಒ ಎಚ್.ಜಿ.ಶ್ರೀನಿವಾಸ್, ಗ್ರಾಮೀಣಾಭಿವೃದ್ಧಿ ಸಹಾಯಕ ನಿರ್ದೇಶಕ ಲಿಂಗರಾಜು, ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಸದಸ್ಯ ಟಿ.ಎಚ್. ಆನಂದ್, ಹಲಗೂರು ವಲಯ ಸಮಿತಿ ಅಧ್ಯಕ್ಷೆ ಎಸ್.ಪಿ. ಲಕ್ಷ್ಮಿ, ವಸಂತಮ್ಮ, ನಾಗಮ್ಮ, ರತ್ನಮ್ಮ, ತೇಜಸ್ವಿನಿ, ಗೌರಮ್ಮ, ಶಿಲ್ಪಾ, ಗೌರಮ್ಮ, ರಾಜೇಗೌಡ, ಮಹೇಶ ಭಾಗವಹಿಸಿದ್ದರು.

ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಚಂದ್ರಶೇಖರ್ ಅವರು ಸಮಸ್ಯೆಗಳನ್ನು ಆಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.