ADVERTISEMENT

ಬಡವರಿಗೆ ಸೂರು ಕಲ್ಪಿಸಲು ಒತ್ತಾಯ

ಶ್ರೀರಂಗಪಟ್ಟಣ ಪುರಸಭೆ ಸಾಮಾನ್ಯ ಸಭೆ: ಮನವಿ ಸಲ್ಲಿಸಿದ್ದರೂ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:15 IST
Last Updated 27 ಫೆಬ್ರುವರಿ 2021, 3:15 IST
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಚರ್ಚೆ ನಡೆಯಿತು
ಶ್ರೀರಂಗಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಚರ್ಚೆ ನಡೆಯಿತು   

ಶ್ರೀರಂಗಪಟ್ಟಣ: ಪಟ್ಟಣದ ಬೂದಿ ಗುಂಡಿ ಸೇರಿದಂತೆ ಇತರೆಡೆ ಸರ್ಕಾರಿ ಹಾಗೂ ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಖಾತೆ ಮಾಡಿಕೊಟ್ಟು ಬಡ ಜನರಿಗೆ ಸ್ವಂತ ಸೂರು ಕಲ್ಪಿಸಿಕೊಡಬೇಕು ಎಂದು ಪುರಸಭೆ ಸದಸ್ಯ ಎಸ್‌.ಟಿ. ರಾಜು, ಎಂ.ಶ್ರೀನಿವಾಸ್‌ ಒತ್ತಾಯಿಸಿದರು.

ಇಲ್ಲಿನ ಪುರಸಭೆ ಕಚೇರಿ ಸಭಾಂಗ ಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು.

ಕೂಲಿ ಅರಸಿಕೊಂಡು ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರು 30–40 ವರ್ಷಗಳ ಹಿಂದೆ ಇಲ್ಲೇ ನೆಲೆ ನಿಂತಿದ್ದಾರೆ. ಮಕ್ಕಳು, ಮೊಮ್ಮಕ್ಕಳೂ ಇದ್ದಾರೆ. ತಾವು ನಿರ್ಮಿಸಿಕೊಂಡಿರುವ ಗುಡಿಸಲು, ಕಲ್ನಾರ್ ಶೀಟಿನ ಮನೆಗಳಿಗೆ ಖಾತೆ ಮಾಡಿಕೊಡುವಂತೆ ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಆದರೂ ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ? ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಸದಸ್ಯರಾದ ಎಂ.ಎಲ್‌.ದಿನೇಶ್‌, ರಾಧಾ ಶ್ರೀಕಂಠು ಇತರರು ದನಿಗೂಡಿಸಿದರು.

ಪೌರಕಾರ್ಮಿಕರೂ ಸೇರಿದಂತೆ ವಸತಿ ರಹಿತರಿಗೆ ನಿವೇಶನ ಹಂಚಲು ಸರ್ಕಾರಿ ಜಾಗ ಗುರುತಿಸುವ ಸಂಬಂಧ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾ ಗು ವುದು ಎಂದು ಮುಖ್ಯಾಧಿಕಾರಿ ಕೃಷ್ಣ ಹೇಳಿದರು.

ಪುರಸಭೆ ವಕೀಲರಾಗಿದ್ದ ವೆಂಕಟಪ್ಪ ಈಚೆಗೆ ನಿಧನರಾಗಿದ್ದು, ಹೊಸ ವಕೀಲರನ್ನು ನೇಮಕ ಮಾಡಿಕೊಳ್ಳಬೇಕಿದೆ. ಬಾಲರಾಜು, ಹೇಮಾರಾಧ್ಯ, ಪುಷ್ಪಲತಾ ಎಂಬ ವರು ಅರ್ಜಿ ಸಲ್ಲಿಸಿದ್ದಾರೆ ಎಂದು ಮುಖ್ಯಾ ಧಿಕಾರಿ ಕೃಷ್ಣ ಸಭೆಯ ಗಮನಕ್ಕೆ ತಂದರು.

ಅಧಿಕೃತ ಜ್ಞಾಪನ ಹೊರಡಿಸದೆ ವಕೀಲರನ್ನು ನೇಮಿಸಿಕೊಂಡರೆ ಅಸಿಂಧುವಾಗುತ್ತದೆ. ನಿಯಮ ಉಲ್ಲಂಘಿಸಿದರೆ ಪುರಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಸದಸ್ಯರಾದ ಎಸ್‌.ನಂದೀಶ್‌, ಎಂ.ನಂದೀಶ್‌ ಆಕ್ಷೇಪ ವ್ಯಕ್ತಪಡಿಸಿದರು.

ರಾಜರ ಹೆಸರಿಡಿ: ಇದು ಐತಿಹಾಸಿಕ ಮಹತ್ವದ ಪಟ್ಟಣ. ರಸ್ತೆಗಳು, ಬಡಾವಣೆಗಳಿಗೆ ಇಲ್ಲಿ ಆಳಿದ ರಾಜ ಒಡೆಯರ್‌, ಕಂಠೀರವ ನರಸರಾಜ ಒಡೆಯರ್‌, ಚಿಕ್ಕದೇವರಾಜ ಒಡೆಯರ್‌ ಇತರರ ಹೆಸರಿಡಬೇಕು. ಆ ಮೂಲಕ ಈ ಊರಿನ ಪರಂಪರೆಯನ್ನು ಜೀವಂತಗೊಳಿಸಬೇಕು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಜನನ ಮಂಟಪ ಅನಾಥವಾಗಿದ್ದು, ಅದರ ರಕ್ಷಣೆಗೆ ಕ್ರಮ ವಹಿಸಬೇಕು. ಪತ್ರಕರ್ತರ ಕ್ಷೇಮ ನಿಧಿಗೆ ₹ 2 ಲಕ್ಷ ಮೀಸಲಿಡಬೇಕು ಎಂದು ಎಂ. ನಂದೀಶ್‌ ಸಲಹೆ ನೀಡಿದರು. ಇದಕ್ಕೆ ಸಭೆ ಒಕ್ಕೊರಲ ಸಮ್ಮತಿ ಸೂಚಿಸಿತು.

ಆಸ್ತಿ ರಕ್ಷಿಸಿ: ಕೆಲವೆಡೆ ಪುರಸಭೆ ಆಸ್ತಿ ಅತಿಕ್ರಮವಾಗುತ್ತಿದ್ದು, ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಎಲ್ಲ ಆಸ್ತಿಗಳಿಗೆ ಫಲಕ ಹಾಕಬೇಕು ಎಂದು ಸದಸ್ಯರಾದ ವಸಂತಕುಮಾರಿ ಲೋಕೇಶ್‌, ರಾಧಾ ಶ್ರೀಕಂಠ, ಎಂ.ಎಲ್‌.ದಿನೇಶ್‌ ಒತ್ತಾಯಿಸಿದರು.

ಹಲವು ವಾರ್ಡ್‌ಗಳಲ್ಲಿ ಕಾಮಗಾರಿ ಅಪೂರ್ಣವಾಗಿದ್ದು, ಶೀಘ್ರ ಪೂರ್ಣ ಗೊಳಿಸಿ ಎಂದು ಸದಸ್ಯರು ಆಗ್ರಹಿಸಿದರು. ಅಗತ್ಯ ಇರುವೆಡೆ ಅಂಗನವಾಡಿಗಳ ನಿರ್ಮಾಣ, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಇತರ ವಿಷಯಗಳು ಸಭೆಯಲ್ಲಿ ಚರ್ಚೆಯಾದವು.

ಅಧ್ಯಕ್ಷೆ ಪಿ.ನಿರ್ಮಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಕಾಶ್‌, ಸದಸ್ಯರಾದ ಕೃಷ್ಣಪ್ಪ, ಶಿವು ಚರ್ಚೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.